

ಕೀವ್: ಮಂಗಳವಾರದಂದು (ಮಾರ್ಚ್ 1) ಹಾವೇರಿ ಮೂಲದ ನವೀನ್, ಖಾರ್ಕಿವ್ನಲ್ಲಿ ರಷ್ಯಾದ ಬಾಂಬ್ ದಾಳಿಗೆ ಬಲಿಯಾದ ಬೆನ್ನಲ್ಲೇ ಇನ್ನೋರ್ವ ಭಾರತೀಯ ಯೂಕ್ರೇನ್ನಲ್ಲಿ ಮೃತಪಟ್ಟಿದ್ದಾನೆ.
ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದ ಪಂಜಾಬ್ ಮೂಲದ ಚಂದನ್ ಜಿಂದಾಲ್ ಎಂಬ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಆದರೆ ಈತನ ಸಾವಿಗೂ, ಯೂಕ್ರೇನ್ನಲ್ಲಿ ನಡೆಯುತ್ತಿರುವ ದಾಳಿಗೂ ಸಂಬಂಧವಿಲ್ಲ ಎಂದು ಮೂಲಗಳು ಹೇಳಿವೆ.
ಚಂದನ್ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು. ಇಸ್ಕೆಮಿಕ್ ಸ್ಟ್ರೋಕ್ ಎಂದರೆ ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು. ಚಿಕಿತ್ಸೆಗಾಗಿ ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಯುವಕನ ಕುಟುಂಬಸ್ಥರಿಗೆ ಈಗಾಗಲೇ ವಿಷಯ ತಿಳಿಸಲಾಗಿದ್ದು, ಮಗನ ಮೃತದೇಹ ತರಲು ಸಹಾಯ ಮಾಡುವಂತೆ ಯುವಕನ ತಂದೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.