ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ದೇಶ್​ಮುಖ್​ಗೆ ಜಾಮೀನು- ಆದರೂ ಇಲ್ಲ ಬಿಡುಗಡೆಯ ಭಾಗ್ಯ!

deshmukh
Published on

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅನಿಲ್ ದೇಶ್‌ಮುಖ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶ್​ಮುಖ್​ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ದೇಶ್​ಮುಖ್​ ಮುಂಬೈ ಹೈಕೋರ್ಟ್​ ಮೊರೆ ಹೋಗಿದ್ದರು. ಅವರಿಗೆ ಈಗ ಜಾಮೀನು ಮಂಜೂರಾಗಿದೆ.

ಇದರ ಹೊರತಾಗಿಯೂ ದೇಶ್​ಮುಖ್​ ಅವರಿಗೆ ಜೈಲೇ ಗತಿ. ಇದಕ್ಕೆ ಕಾರಣ, ಕಳೆದ ವರ್ಷ ಏಪ್ರಿಲ್‌ನಲ್ಲಿ ಇವರ ವಿರುದ್ಧ ಸಿಬಿಐ ಇನ್ನೊಂದು ಪ್ರಕರಣ ದಾಖಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಕೇಸ್​ನಲ್ಲಿ ಜಾಮೀನು ಮಂಜೂರು ಆಗಿದ್ದರೂ, ಅವರು ಜೈಲಿನಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ.

ಏನಿದು ಕೇಸ್​?

ಕಳೆದ ಫೆಬ್ರವರಿ 25ರಂದು, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಆಂಟಿಲಿಯಾ ಹೊರಗೆ ಸ್ಫೋಟಕಗಳನ್ನು ತುಂಬಿದ ವಾಹನವು ಪತ್ತೆಯಾಗಿತ್ತು. ಈ ಕೃತ್ಯದ ಹಿಂದೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೆಸರು ಕೇಳಿಬಂದಿತ್ತು. ಇದಾದ ನಂತರ, ಮಹಾರಾಷ್ಟ್ರ ಸರ್ಕಾರವು ಆಗಿನ ಮುಂಬೈ ಪೊಲೀಸ್ ಕಮಿಷನರ್ ಪರಂಬಿರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿತು. ಅವರನ್ನು ಗೃಹರಕ್ಷಕ ದಳದ ಡಿಜಿಯನ್ನಾಗಿ ಮಾಡಿತು.

ಅನಿಲ್ ದೇಶ್‌ಮುಖ್ 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ಅವರು ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು. ಬಳಿಕ ಈ ಆರೋಪದ ಹಿನ್ನೆಲೆಯಲ್ಲಿ ಅನಿಲ್ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮುಂಬೈನ ಹೋಟೆಲ್‌ಗಳು ಮತ್ತು ಬಾರ್‌ಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಅವರಿಗೆ ಅನಿಲ್ ದೇಶಮುಖ್ ನಿರ್ದೇಶನ ನೀಡಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ ನಂತರ ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಈಗ ಈ ಕೇಸ್​ನಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net