

ಶ್ರೀನಗರ: ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಪುನರಾರಂಭಿಸಿದ 36 ಗಂಟೆಗಳಲ್ಲಿಯೇ ಮತ್ತೆ ಎಂಟು ಮಂದಿ ಮೃತಪಟ್ಟಿದ್ದಾರೆ. ವಿಪರೀತ ಮಳೆ ಹಾಗೂ ಗುಡ್ಡಗಳ ಕುಸಿತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ನಿನ್ನೆ (ಜುಲೈ 14) ಪುನಃ ಸ್ಥಗಿತಗೊಳಿಸಲಾಗಿದೆ. ಆದರೆ ಇದಕ್ಕೂ ಮುನ್ನ ಎಂಟು ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ.
ಮೃತಪಟ್ಟವರನ್ನು ಕರ್ನಾಟಕದ ಬಸವರಾಜ (68), ರಾಜಸ್ಥಾನದ ಮೊಂಗಿಲಾಲ್ (52), ಗುಜರಾತ್‌ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್ (57), ಸಿಂಗಪುರದ ಪೂನಿಯಾಮೂರ್ತಿ (63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಆಂಧ್ರಪ್ರದೇಶದ ಕಲವಲ ಸುಬ್ರಮಣ್ಯಂ (63), ಉತ್ತರ ಪ್ರದೇಶದ ಗೋವಿಂದ್ ಶರಣ್ (34) ಮತ್ತು ಹರಿಯಾಣದ ಸತ್ವೀರ್ ಸಿಂಗ್ (70) ಎಂದು ಗುರುತಿಸಲಾಗಿದೆ.
ಈ ಮೂಲಕ ಒಟ್ಟು ಸಾವಿನ ಸಂಖ್ಯೆ 41 ತಲುಪಿದೆ. ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಒಟ್ಟು 15 ಮಂದಿ ಯಾತ್ರಿಕರು ಸೇರಿ ಒಟ್ಟೂ 33 ಮಂದಿ ಮೃತಪಟ್ಟಿದ್ದರು.
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಎಲ್ಲ ರೀತಿಯ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭ ಮಾಡಲಾಗಿದೆ. ಜುಲೈ 8 ರಂದು ಹಠಾತ್ ಪ್ರವಾಹದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಮತ್ತೆ ಜುಲೈ 11 ರಂದು ಯಾತ್ರೆಯನ್ನು ಪುನರಾರಂಭ ಮಾಡಲಾಗಿದ್ದು, ತಾತ್ಕಾಲಿಕವಾಗಿ ಮತ್ತೆ ಸ್ಥಗಿತಗೊಳಿಸಲಾಗಿದೆ.