ಕೊಟ್ಟ ಮಾತು ಉಳಿಸಿಕೊಂಡ ಗರ್ಭಿಣಿ ಆಲಿಯಾ ಭಟ್​: ಹಾಲಿವುಡ್​ ಶೂಟಿಂಗ್​ನಲ್ಲಿ ಬೇಬಿಬಂಪ್ ವೈರಲ್​

Alia
Published on

ಮುಂಬೈ: ಕಳೆದ ಏಪ್ರಿಲ್​ 14ರಂದು ನಟಿ ಆಲಿಯಾ ಭಟ್​ ಹಾಗೂ ನಟ ರಣಬೀರ್​ ಕಪೂರ್​ ಅವರ ಮದುವೆಯಾಗಿದೆ. ಮದುವೆಯಾದ ಎರಡು ತಿಂಗಳಿನಲ್ಲಿಯೇ ತಾವು ಗರ್ಭಿಣಿಯಾಗಿರುವ ವಿಷಯವನ್ನು ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇವರು ಈ ಸುದ್ದಿ ಹಂಚಿಕೊಳ್ಳುತ್ತಲೇ ಥಹರೇವಾರಿ ಕಮೆಂಟ್​ಗಳು ಬಂದಿದ್ದವು. ಅವರ ಅಭಿಮಾನಿಗಳೆಲ್ಲಾ ಇಷ್ಟು ಬೇಗ ತಾಯಿಯಾಗಲಿರುವ ಸುದ್ದಿ ಕೇಳಿ ಶಾಕ್​ ಆಗಿದ್ದರೆ, ಹಲವರು ನೆಗೆಟಿವ್​ ಕಮೆಂಟ್​ಗಳನ್ನೂ ಮಾಡಿದ್ದರು. ನೆಗೆಟಿವ್​ ಕಮೆಂಟ್​ಗಳ ಕುರಿತು ಆಲಿಯಾ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದೇ ಒಂದು ಕಮೆಂಟ್​ಗೆ ಅವರು ಬೇಸರಗೊಂಡಿದ್ದರು. ಅದೇನೆಂದರೆ, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಗತಿ ಏನು ಪ್ರಶ್ನಿಸಿದ್ದರು. ಮೊದಲೇ ಗರ್ಭಿಣಿಯಾಗುವ ಪ್ಲ್ಯಾನ್​ ಮಾಡಿಕೊಂಡಿದ್ದರೆ ಚಿತ್ರಗಳನ್ನು ಏಕೆ ಒಪ್ಪಿಕೊಳ್ಳಬೇಕಿತ್ತು ಎಂದೆಲ್ಲಾ ಕೇಳಿದ್ದರು.

ಇದು ಆಲಿಯಾ ಅವರನ್ನು ಕೆರಳಿಸಿತ್ತು. ಏಕೆಂದರೆ ಬೇಡಿಕೆಯ ಉತ್ತುಂಗದಲ್ಲಿ ಇರುವ ನಟಿ ಆಲಿಯಾ ಕೈಯಲ್ಲಿ ಕೆಲ ಚಿತ್ರಗಳು ಇವೆ. ಆದರೆ ಎಲ್ಲವನ್ನೂ ಅವರು ಪ್ಲ್ಯಾನ್​ ಮಾಡಿಕೊಂಡೇ ಮಾಡಿರುವುದು. ಈ ಕಮೆಂಟ್​ಗೆ ಉತ್ತರಿಸಿದ್ದ ನಟಿ, ನೀವೇನೂ ಚಿಂತಿಸಬೇಡಿ, ಯಾರಿಗೂ ಕೈಕೊಡಲ್ಲ. ಒಪ್ಪಿಕೊಂಡ ಚಿತ್ರಗಳನ್ನೆಲ್ಲವನ್ನೂ ಮುಗಿಸಿಯೇ ಡೆಲಿವರಿಗೆ ಹೋಗುವುದು ಎಂದಿದ್ದರು.

ಈ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ಪೂರ್ತಿಗೊಳಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಇದ್ದುದು, ಟಾಮ್ ಹಾರ್ಪೆರ್ ನಿರ್ದೇಶಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾ ಹಾರ್ಟ್ ಆಫ್ ಸ್ಟೋನ್. ಆಲಿಯಾ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಮೊದಲು ದಿಗಿಲುಗೊಂಡದ್ದು ಈ ಚಿತ್ರತಂಡ. ಆದರೆ ಕೊಟ್ಟ ಮಾತಿನಂತೆ ಆಲಿಯಾ ಶೂಟಿಂಗ್​ ಮುಗಿಸಿದ್ದಾರೆ. ಚಿತ್ರದ ಶೂಟಿಂಗ್​ನ ಕೆಲವು ಫೋಟೋಗಳು ವೈರಲ್​ ಆಗಿದ್ದು, ಅದರಲ್ಲಿ ಆಲಿಯಾ ಗರ್ಭಿಣಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಮಾತ್ರವಲ್ಲದೇ ಈಕೆ ಸ್ವಲ್ಪ ಸುಸ್ತಾಗಿರುವಂತೆಯೂ ಕಂಡುಬರುತ್ತಿದೆ.

ಶೂಟಿಂಗ್​ ಮುಗಿಸಿದ ನಂತರ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಲಿಯಾ, ಹಾರ್ಟ್ ಆಫ್ ಸ್ಟೋನ್' ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಹಾಗೂ ನಿರ್ದೇಶಕ ಟಾಮ್ ಹಾರ್ಪೆರ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಕೂಡ ಟ್ವೀಟ್​ ಮಾಡಿದ್ದು, "ನನ್ನ ಹುಡುಗಿ ಆಲಿಯಾ ಭಟ್‌ಗೆ ಸ್ಪಲ್ಪ ಪ್ರೀತಿ ಕೊಡಿ. ಇವತ್ತು ಹಾರ್ಟ್ ಆಫ್ ಸ್ಟೋನ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಎಂತಹ ಅದ್ಭುತ ನಟಿ. ಹಾಗೇ ಅತ್ಯುತ್ತಮ ವ್ಯಕ್ತಿ' ಎಂದಿದ್ದಾರೆ. ಅವರು ಆಲಿಯಾ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರ ನೆಟ್‌ಫಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಗ್ಯಾಲ ಗ್ಯಾಡೋಟ್ ಹಾಗೂ ಆಲಿಯಾ ಭಟ್ ಇಬ್ಬರೂ ಗೂಢಾಚಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net