

ಲಖನೌ: ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತಂದೆ, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಅಧಿಕೃತ ಟ್ವಿಟರ್‌ನಲ್ಲಿ ಅವರ ಫೋಟೋ ಶೇರ್ ಮಾಡಲಾಗಿದೆ.
ಇದು ಅಖಿಲೇಶ್ ಅವರನ್ನು ಮುಜುಗರಕ್ಕೆ ಸಿಲುಕಿಸಿದೆ. ಇದಕ್ಕೆ ಕಾರಣ, ಲಸಿಕೆ ಆರಂಭವಾದ ಮೊದಲ ದಿನದಿಂದಲೂ ಅಖಿಲೇಶ್, ಇದು ಬಿಜೆಪಿ ವ್ಯಾಕ್ಸಿನ್, ಇದರ ಮೇಲೆ ನನಗೆ ನಂಬಿಕೆ ಇಲ್ಲ, ನಾನು ಅದನ್ನು ಹಾಕಿಕೊಳ್ಳುವುದಿಲ್ಲ ಎಂದು ಕಂಡಕಂಡಲ್ಲಿ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈಗ ಅವರ ತಂದೆಯೇ ಲಸಿಕೆ ಹಾಕಿಸಿಕೊಂಡಿದ್ದೂ ಅಲ್ಲದೇ ಅದು ಟ್ವಿಟರ್‌ನಲ್ಲಿ ಶೇರ್ ಆಗಿರುವ ಕಾರಣ, ಅಖಿಲೇಶ್ ಬಿಜೆಪಿ ಮುಖಂಡ ಬಾಯಿಗೆ ಆಹಾರವಾಗಿದ್ದಾರೆ.
81 ವರ್ಷದ ಯಾದವ್ ಮೇದಂತ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ. ಇದರ ಫೋಟೋ ಟ್ವಿಟರ್‌ನಲ್ಲಿ ಶೇರ್ ಆಗುತ್ತಿದ್ದಂತೆಯೇ, ತಂದೆಯಿಂದಾದರೂ ಮಗ ಪ್ರೇರಣೆ ಪಡೆಯಲಿ ಎಂದು ಬಿಜೆಪಿ ತಿರುಗೇಟು ನೀಡಿದೆ. ಮುಲಾಯಂ ಸಿಂಗ್ ಯಾದವ್ ಅವರು ಲಸಿಕೆ ಪಡೆಯುವ ಮೂಲಕ ಉತ್ತಮ ಸಂದೇಶ ರವಾನಿಸಿದ್ದಾರೆ. ಎಸ್‍ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಇವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ. ಇದೊಂದು ಉತ್ತಮ ಸಂದೇಶವಾಗಿದೆ, ಇವರು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.