ಎಸ್​ಪಿ ಭದ್ರಕೋಟೆಗೆ ಬಿಜೆಪಿ ಲಗ್ಗೆ: ಹೀನಾಯ ಸೋಲಿಗೆ ತತ್ತರಿಸಿ ಒಬ್ಬರನ್ನು ಬಿಟ್ಟು ಎಲ್ಲಾ ಹುದ್ದೆ ವಿಸರ್ಜಿಸಿದ ಅಖಿಲೇಶ್​!

Akhilesh Yadav
Published on

ಲಖನೌ: ಈಚೆಗೆ ನಡೆದಿದ್ದ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಭದ್ರಕೋಟೆಗಳಾಗಿದ್ದ ಉತ್ತರ ಪ್ರದೇಶದ ರಾಂಪುರ ಮತ್ತು ಅಜಂಗಢದಲ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತತ್ತರಿಸಿಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಯುವ ಹಾಗೂ ಮಹಿಳಾ ವಿಭಾಗ ಸೇರಿದಂತೆ ಎಲ್ಲ ಘಟಕಗಳ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಘಗಳನ್ನು ವಿಸರ್ಜಿಸಿದ್ದಾರೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪಕ್ಷದ ರಾಜ್ಯಾಧ್ಯಕ್ಷರನ್ನು ಹೊರತುಪಡಿಸಿ, ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಘಟಕಗಳನ್ನು ವಿಸರ್ಜಿಸಿದ್ದಾರೆ ಎಂದು ಟ್ವಿಟರ್​ನಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕೆ ಅಧಿಕೃತ ಕಾರಣಗಳನ್ನು ಅವರು ನೀಡಲಿಲ್ಲ. ಆದರೆ ಉಪ ಚುನಾವಣೆಯ ಸೋಲಿನಿಂದಲೇ ಈ ರೀತಿ ಮಾಡಿರುವುದಾಗಿ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. ಸೋಲಿನ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವನ್ನು ಸಂಪೂರ್ಣ ಪುನರುಜ್ಜೀವನಗೊಳಿಸುವ ಪ್ರಯತ್ನ ಇದು ಎಂದು ಹೇಳಲಾಗಿದೆ.

2024ರ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷವು ಸಜ್ಜಾಗುತ್ತಿದ್ದು, ಬಿಜೆಪಿಯನ್ನು ಸಂಪೂರ್ಣ ಬಲದಿಂದ ಎದುರಿಸಲು ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net