

ಬರೇಲಿ (ಉತ್ತರ ಪ್ರದೇಶ): ಯಾವುದೇ ಕಾಯ್ದೆ- ಕಾನೂನು ಜಾರಿಗೊಳಿಸಿದರೆ ಅದನ್ನು ದುರುಪಯೋಗ ಮಾಡಿಕೊಳ್ಳುವ ಒಂದು ವರ್ಗವೇ ಹುಟ್ಟಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ಅಂಥದ್ದೇ ಒಂದು ದುರುಪಯೋಗ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
22 ವರ್ಷದ ಹಿಂದೂ ವಿವಾಹಿತೆಯೊಬ್ಬಳು ಮೂವರು ಮುಸ್ಲಿಂ ಯುವಕರ ವಿರುದ್ಧ ಮತಾಂತರ ನಿಷೇಧ ಕಾಯ್ದೆ ಅಡಿ ಕೇಸು ದಾಖಲು ಮಾಡಿ ಇದೀಗ ಸಿಕ್ಕಿಬಿದ್ದಿದ್ದಾಳೆ. ಬಂದೂಕು ಹಿಡಿದು ನನ್ನನ್ನು ಮತಾಂತರ ಮಾಡಲು ನೋಡಿದ್ದರು, ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ದಾಖಲಿಸಿದ್ದಳು ಈಕೆ.
ಡಿಸೆಂಬರ್ 1 ರಂದು ಗನ್‌ಪಾಯಿಂಟ್‌ನಿಂದ ನನ್ನನ್ನು ಬೆದರಿಸಿ ಮತಾಂತರಗೊಳಿಸಲು ಮೂವರು ಯುವಕರು ಯತ್ನಿಸಿದರು ಮಾತ್ರವಲ್ಲದೇ ಮದುವೆಯಾಗುವಂತೆ ಬಲವಂತಗೊಳಿಸಿದರು, ಲೈಂಗಿಕ ಕಿರುಕುಳವನ್ನೂ ನೀಡಿದರು ಎಂದು ಯುವತಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಳು. ನಂತರ ಹೀಗೆ ಮಾಡದಿದ್ದರೆ ನನ್ನ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಹೇಳಿದ್ದಳು.
ದೂರು ದಾಖಲು ಮಾಡಿಕೊಂಡ ಪೊಲೀಸರು ಆ ಮೂವರು ಯುವಕರಿಗಾಗಿ ಜಾಲ ಬೀಸಿದರು. ಅಂತೂ ಯುವಕರು ಸಿಕ್ಕರು. ಆದರೆ ಪೊಲೀಸರು ತನಿಖೆ ಕೈಗೊಂಡಾಗ ಯಾವ ದಿನ ಆ ಯುವಕರು ತನಗೆ ಈ ರೀತಿ ಮಾಡಿದ್ದರು ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಳೋ ಆ ದಿನ ಆ ಮೂವರೂ ಯುವಕರು ಊರಿನಲ್ಲಿಯೇ ಇರಲಿಲ್ಲ!
ನಂತರ ಯುವತಿ ಈ ರೀತಿ ಸುಳ್ಳು ಹೇಳಿಕೆ ನೀಡಿರುವ ಹಿಂದಿನ ಕಾರಣವನ್ನು ಪೊಲೀಸರು ಹುಡುಕಿದರು. ನಂತರ ಗೊತ್ತಾದದಷ್ಟು ಇಷ್ಟು.
ಈ ಯುವತಿಯು ಮದುವೆಯಾಗುವ ಮುನ್ನ ಈ ಮೂವರು ಯುವಕ ಪೈಕಿ ಒಬ್ಬಾತನನ್ನು ಪ್ರೀತಿಸುತ್ತಿದ್ದಳು. ಅವನ ಜತೆ ಸುತ್ತಾಡಿದ್ದಳು ಕೂಡ. ಮಾತ್ರವಲ್ಲದೇ ಮನೆಯವರು ವಿರೋಧ ಒಡ್ಡಿದ್ದರಿಂದ ಅವನ ಜತೆ ಓಡಿಹೋಗಿ ಕೆಲದಿನ ಇದ್ದಳು.
ಈ ನಡುವೆ ಆಕೆಯ ಚಿಕ್ಕಪ್ಪ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಯುವತಿಯನ್ನು ತಂದು ಪಾಲಕರಿಗೆ ಒಪ್ಪಿಸಿದ್ದರು. ನಂತರ ಆಕೆಯ ವಿವಾಹವನ್ನು ಬೇರೊಬ್ಬನ ಜತೆ ಮಾಡಲಾಗಿತ್ತು.
ಇಷ್ಟಕ್ಕೇ ಸುಮ್ಮನಾಗದ ಯುವತಿ, ಮದುವೆಯಾದ ಮೇಲೆ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ವಿರುದ್ಧ ಮತಾಂತರ ನಿಷೇಧ ಕಾಯ್ದೆ ಅಡಿ ದೂರು ದಾಖಲಿಸಿದ್ದಾಳೆ. ಅವರ ಮೊಬೈಲ್ ಸಂಖ್ಯೆಯನ್ನು, ಟವರ್ಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅಂದು ಯುವಕರು ಊರಿನಲ್ಲಿ ಇರಲಿಲ್ಲ, ಅಷ್ಟೇ ಅಲ್ಲದೇ ಯುವತಿ ಹೇಳಿದ ಜಾಗದಲ್ಲಿ ಅವರು ಇರಲಿಲ್ಲ ಎಂದು ತಿಳಿದು ಕಂಪ್ಲೇಂಟ್ ರದ್ದು ಮಾಡಿದ್ದಾರೆ. ಈಗ ಯುವತಿಯ ವಿಚಾರಣೆ ನಡೆಯುತ್ತಿದೆ.