

ಚೆನ್ನೈ: ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಇಂದು ಬೆಳಗ್ಗೆ ಮಾರಾಮಾರಿ ನಡೆದಿದೆ. ಎಐಎಡಿಎಂಕೆ ಕಚೇರಿ ಎದುರು ಇ. ಪಳನಿಸ್ವಾಮಿ (ಇಪಿಎಸ್) ಮತ್ತು ಓ. ಪನೀರ್‌ಸೆಲ್ವಂ (ಓಪಿಎಸ್) ಬಣಗಳ ನಡುವೆ ಪಕ್ಷದ ಕಚೇರಿ ಎದುರೇ ಹೈಡ್ರಾಮಾ ನಡೆದಿದ್ದು, ರಸ್ತೆಯಲ್ಲಿಯೇ ಎರಡೂ ಕಡೆಯ ನಾಯಕರು, ಕಾರ್ಯಕರ್ತರು ಕಲ್ಲು, ದೊಣ್ಣೆ ಹಿಡಿದುಕೊಂಡು ಗಲಾಟೆ ಮಾಡಿದ್ದಾರೆ.
ಇದಕ್ಕೆ ಕಾರಣ, ತಮಿಳುನಾಡಿನ ಎಐಎಡಿಎಂಕೆಯಲ್ಲಿ ನಾಯಕತ್ವಕ್ಕಾಗಿ ಈ ಎರಡು ಬಣಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟ! ಇಂದು ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಎರಡೂ ಬಣಗಳ ನಡುವೆ ಕಿತ್ತಾಟ ಶುರುವಾಗಿತ್ತು. ಓ. ಪನೀರ್‌ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲು ಒಡೆದಿದ್ದಾರೆ. ರಸ್ತೆಯಲ್ಲೇ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡು ಗಲಾಟೆಯೆಬ್ಬಿಸಿದ್ದರು. ಈ ನಡುವೆ, ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನವೀಕರಿಸಲು ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸುವ ಸಭೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಓ. ಪನ್ನೀರಸೆಲ್ವಂ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ವಿಚಾರಣೆಯನ್ನು ನಡೆಸಿ, ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿತು. ಓ. ಪನ್ನೀರಸೆಲ್ವಂ ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು.
ಈ ಹಿನ್ನೆಲೆಯಲ್ಲಿ ಸಭೆ ನಡೆದಿದೆ. ಜನರಲ್ ಕೌನ್ಸಿಲ್ ಸಭೆಯಲ್ಲಿ ಇ. ಪಳನಿಸ್ವಾಮಿ ಎಐಎಡಿಎಂಕೆ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಓ ಪನ್ನೀರ್ಸೆಲ್ವಂಗೆ ಭಾರಿ ಹಿನ್ನಡೆಯಾಗಿದೆ.
ಇಂದಿನ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯು ಪೆರಿಯಾರ್, ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ ಜಯಲಲಿತಾ ಅವರಿಗೆ ಭಾರತ ರತ್ನಕ್ಕೆ ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿತು. ಪಕ್ಷದ ಸಭೆಯಲ್ಲಿ ಎಐಎಡಿಎಂಕೆಯ ಹೊಣೆಗಾರಿಕೆಯನ್ನು ಪಳನಿಸ್ವಾಮಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ಎರಡೂ ಬಣಗಳ ನಡುವೆ ನಡೆದಿದ್ದ ಗಲಾಟೆ ವಿಡಿಯೋ: