ಕೃಷಿಕರಿಗೆ ಗುಡ್ ನ್ಯೂಸ್‌: ಬೆಳೆ ಖರೀದಿಗೆ 2.37 ಲಕ್ಷ ಕೋಟಿ ರೂ ಮೀಸಲು, ದೇಶದಲ್ಲಿಯೇ ತೈಲ ಉತ್ಪನ್ನ

Agriculture 5 March 20
Published on

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೃಷಿಕರಿಗೆ ಸಂತಸದ ಸುದ್ದಿಯನ್ನು ನೀಡಲಾಗಿದೆ. ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕ ದೇಶದಲ್ಲಿಯೇ ತೈಲ ಉತ್ಪಾದನೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ತೈಲ ಆಮದು ಕಡಿತಗೊಳಿಸಿ, ಭಾರತದಲ್ಲಿಯೇ ತೈಲ ತಯಾರಿಕೆಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ರೈತರ ಬೆಳೆಗಳನ್ನು ಖರೀದಿ ಮಾಡಲು 2.37 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು. ಇದು ಏಪ್ರಿಲ್​ 2022 ರಿಂದ ಮಾರ್ಚ್​ 2023 ರವರೆಗೆ ಜಾರಿಯಲ್ಲಿರುತ್ತದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರಫ್ತಿಗೆ ಒತ್ತು ನೀಡುವ ಮೂಲಕ ರಾಗಿ ಉತ್ಪಾದನೆಯನ್ನು ಉತ್ತೇಜಿಸಲು ಎಣ್ಣೆಬೀಜ ಕೃಷಿಯನ್ನು ಉತ್ತೇಜಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲು ಭೂ ದಾಖಲೆಗಳ ಡಿಜಿಟಲೀಕರಣವನ್ನು ತ್ವರಿತಗೊಳಿಸಲಾಗುವುದು.

ಗೋಧಿ, ರಾಗಿ ಬೆಳೆಗಳ ಖರೀದಿಯನ್ನೂ ಸರ್ಕಾರ ಹೆಚ್ಚಿಸಲಿದೆ. ರೈತರು ತಮಗೆ ಅನುಕೂಲವಾಗುವಂತಹ ಹಣ್ಣು, ತರಕಾರಿ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ರೈತರಿಂದ ಎಂಎಸ್​ಪಿ ದರದಲ್ಲಿ ದಾಖಲೆಯ ಖರೀದಿ ಮಾಡಲಾಗುವುದು. ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ ನೀಡಲಾಗುವುದು. ಎಂದು ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕೃಷಿ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಪಠ್ಯ ಹಾಗೂ ಸಂಶೋಧನೆಗೆ ಅತ್ಯಗತ್ಯ ನೆರವು ನೀಡಲಾಗುವುದು ಎಂದು ಸಚಿವೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net