ಮತ್ತೋರ್ವ ನಟಿಯ ನಿಗೂಢ ಸಾವು- ಇನ್‌ಸ್ಟಾದಲ್ಲಿ ಖುಷಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ನೇಣು! ಬಾಯ್‌ಫ್ರೆಂಡ್‌ ಜತೆ ಆದದ್ದೇನು?

pallavi
Published on

ಕೋಲ್ಕತಾ: ಹಿರಿತೆರೆ, ಕಿರುತೆರೆ ನಟ-ನಟಿಯರ ನಿಗೂಢ ಸಾವಿನ ಸರಣಿ ಮತ್ತೆ ಮುಂದುವರೆದಿದೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌, ನಟಿ ಶ್ರೀದೇವಿ ಅವರ ಸಾವಿನ ಬೆನ್ನಲ್ಲೇ ಹಲವಾರು ನಟ-ನಟಿಯರು ಮೃತಪಟ್ಟಿದ್ದಾರೆ. ಹಲವಕ್ಕೆ ಖಿನ್ನತೆಯೇ ಕಾರಣ ಎಂದು ಹೇಳಲಾಗುತ್ತಿದ್ದರೂ ಕೆಲವು ಸಾವು ನಿಗೂಢವಾಗಿಯೇ ಉಳಿದಿವೆ. ಈಗ ಈ ನಿಗೂಢಗಳ ಸಾಲಿನಲ್ಲಿ ಇದೀಗ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಸರದಿ.

ಶನಿವಾರ (ಮೇ 15) ಸಂಜೆ ದಕ್ಷಿಣ ಕೋಲ್ಕತಾದ ಅಪಾರ್ಟ್​​ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಈ ನಟಿ. ಇದು ಆತ್ಮಹತ್ಯೆಯೆಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಇದು ಆತ್ಮಹತ್ಯೆಯೋ, ಕೊಲೆಯೋ ಎನ್ನುವುದು ನಿಗೂಢವಾಗಿದೆ. ಇದಕ್ಕೆ ಕಾರಣ ಸಾಯುವ ಸ್ವಲ್ಪ ಮುನ್ನ ಬಾಯ್‌ಫ್ರೆಂಡ್‌ ಜತೆ ಈಕೆ ಇದ್ದುದು!

ಈಕೆ ಕಳೆದ ಒಂದೂವರೆ ವರ್ಷಗಳಿಂದ ಸಗ್ನಿಕ್‌ ಚಕ್ರವರ್ತಿ ಎನ್ನುವವರ ಜತೆಗೆ ವಾಸವಾಗಿದ್ದರು. ಕಳೆದ ಫೆಬ್ರುವರಿಯಲ್ಲಿ ದಕ್ಷಿಣ ಕೋಲ್ಕತಾದ ಗಾರ್ಫಾ ಪ್ರದೇಶದಲ್ಲಿ ಅಪಾರ್ಟ್​​ಮೆಂಟ್ ಬಾಡಿಗೆಗೆ ಪಡೆದಿದ್ದು ಅದರಲ್ಲಿಯೇ ಇಬ್ಬರೂ ನೆಲೆಸಿದ್ದರು. ಆತ್ಮಹತ್ಯೆ ಮಾಡಿಕೊಂಡ ಹಿಂದಿನ ರಾತ್ರಿ ಇಬ್ಬರ ನಡುವೆ ಭಾರಿ ಜಗಳವಾಗಿದೆ ಎನ್ನಲಾಗಿದೆ. ಸಿಟ್ಟಿನಿಂದ ಸಗ್ನಿಕ್‌ ಮನೆ ಬಿಟ್ಟು ಹೊರಗೆ ಹೋಗಿದ್ದಾನೆ. ಆತ ಬರುವಷ್ಟರಲ್ಲಿ ಪಲ್ಲವಿ ನೇಣುಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ. ತಾನು ಹೊರಗೆ ಹೋಗಿ ಮನೆಗೆ ಬಂದು ನೋಡಿದಾಗ ಪಲ್ಲವಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಸಗ್ನಿಕ್‌ ಹೇಳಿಕೆ ಕೊಟ್ಟಿದ್ದು, ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಿಜವಾಗಿಯೂ ಈತ ಹೇಳುತ್ತಿರುವುದು ನಿಜವೆ? ಒಂದು ವೇಳೆ ನಿಜವೇ ಆಗಿದ್ದರೆ ಏಕಾಏಕಿ ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಇಬ್ಬರ ನಡುವೆ ಆದ ಮಾತುಕತೆ ಏನು ಎಂಬಿತ್ಯಾದಿ ಪ್ರಶ್ನೆಗಳು ಈಗ ಹುಟ್ಟುಹಾಕಿಕೊಂಡಿವೆ.

ಈ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ಕೈಗೊಂಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣಗಳು ಇರಲಿಲ್ಲ. ಏಕೆಂದರೆ ಕೆಲವೇ ಗಂಟೆಗಳ ಮೊದಲು ಮೋಮೋಸ್‌ ತಿಂದಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದ ಪಲ್ಲವಿ, ನಾನು ತುಂಬಾ ಎಂಜಾಯ್‌ ಮಾಡುತ್ತಿದ್ದೇನೆ, ನಗರವನ್ನು ಸುತ್ತಹಾಕಿಕೊಂಡು ಬಂದು ಮೋಮೋಸ್‌ ಸವಿದಿದ್ದೇನೆ ಎಂದು ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net