

ಜಬಲಪುರ (ಮಧ್ಯಪ್ರದೇಶ): ಏನಾದರೂ ಆಗಲಿ ಮನೆಗೆ ಒಬ್ಬ ಮಗ ಬೇಕು, ನಮ್ಮ ವಂಶವನ್ನು ಉದ್ಧಾರ ಮಾಡಲು ಸಾಧ್ಯವಾಗುವುದು ಮಗನಿಂದಲೇ ವಿನಾ ಮಗಳಿಂದ ಅಲ್ಲ ಎಂದು ಅದೆಷ್ಟೋ ಅಪ್ಪ-ಅಮ್ಮ ದಿನನಿತ್ಯ ಗೊಣಗಾಡುವುದು ಇದೆ. ಹೆಣ್ಣುಮಕ್ಕಳು ಹುಟ್ಟಿದರೆ ಅವರನ್ನು ತಾತ್ಸಾರದಿಂದ ನೋಡುವುದು, ಮಗ ಹುಟ್ಟದಿದ್ದರೆ ಎರಡನೆಯ ಮದುವೆಯಾಗುವುದು, ಸೊಸೆಯನ್ನೇ ಸುಟ್ಟುಹಾಕುವಂಥ ರಾಕ್ಷಸೀ ಕೃತ್ಯಗಳೂ ನಡೆಯುತ್ತಿವೆ. ಇವುಗಳ ನಡುವೆಯೇ ವಯಸ್ಸಾದ ಅಪ್ಪ-ಅಮ್ಮನನ್ನು ನಿರ್ದಾಕ್ಷಿಣ್ಯವಾಗಿ ಇದೇ ಸುಪುತ್ರರು ಹೊರಹಬ್ಬುತ್ತಿರುವುದು ಹೊಸ ವಿಷಯವೇನಲ್ಲ.
ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದಿದ್ದು, ವಯಸ್ಸಾದ ಅಪ್ಪನನ್ನು ಹೊರಹಬ್ಬಿದ ಮಗನಿಗೆ ಕೋರ್ಟ್ ಬುದ್ಧಿ ಕಲಿಸಿದೆ. ಮಗ ಮತ್ತು ಸೊಸೆಯ ವಿರುದ್ಧ ಹೋರಾಡಿ ಹಿರಿಯ ಜೀವವೊಂದು ಈಗ ಜಯ ಸಾಧಿಸಿದೆ.
ಆನಂದಗಿರಿ ಎನ್ನುವವರು ಮಗ ಮತ್ತು ಸೊಸೆಯ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಕಷ್ಟಪಟ್ಟು ಸಾಕಿ, ಸಲುಹಿದ ತಮ್ಮ ಮಗ ಪತ್ನಿ ಬಂದ ಮೇಲೆ ತಮ್ಮನ್ನು ಮನೆಯಿಂದ ಹೊರಕ್ಕೆ ಹಾಕಿ ಎಷ್ಟು ಹೀನಾಯವಾಗಿ ನೋಡಿಕೊಂಡ ಎಂಬ ಬಗ್ಗೆ ಅವರು ಕೋರ್ಟ್‌ಗೆ ತಿಳಿಸಿದ್ದರು.
ಇವರ ಕಥೆ ಕೇಳಿದ ನ್ಯಾಯಾಧೀಶ ಆಶಿಶ್ ಪಾಂಡೆ ಅವರು ತಕ್ಷಣವೇ ಮಗನನ್ನು ಕೋರ್ಟ್‌ಗೆ ಕರೆಸಿ ಛೀಮಾರಿ ಹಾಕಿದ್ದಾರೆ. ಒಂದು ವೇಳೆ ಅಪ್ಪನನ್ನು ವಿನಯಪೂವರ್ಕವಾಗಿ ಮನೆಗೆ ಕರೆದುಕೊಂಡು, ಅವರನ್ನು ಚೆನ್ನಾಗಿ ನೋಡಿಕೊಳ್ಳದೇ ಹೋದರೆ ಗಂಭೀರ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಮಗನ ಜತೆ ಅವನ ಹೆಂಡತಿಗೂ ಬುದ್ಧಿ ಹೇಳಿದ್ದಾರೆ. ನಂತರ ಯಾವ ರೀತಿ ಅಪ್ಪನನ್ನು ಮನೆಗೆ ಸ್ವಾಗತಿಸಬೇಕು ಎಂದು ತಿಳಿಸಿದ್ದಾರೆ.
ನ್ಯಾಯಾಧೀಶರ ಎಚ್ಚರಿಕೆಗೆ ಬೆದರಿದ ಅಪ್ಪ, ತಂದೆಯನ್ನು ಮನೆಗೆ ಕರೆದುಕೊಂಡು ಹೋಗಲು ಒಪ್ಪಿದ್ದಾನೆ. ಮಾತ್ರವಲ್ಲದೇ ಅಲ್ಲಿಯೇ ಹಾಜರು ಇದ್ದ ಅಪ್ಪನ ಕಾಲಿಗೆ ಬಿದ್ದು, ಅವರ ಕಾಲು ತೊಳೆದು ನಮಸ್ಕರಿಸಿ ಕ್ಷಮೆ ಕೋರಿದ್ದಾನೆ. ತನ್ನಿಂದ ತಪ್ಪು ಆಗಿದ್ದು, ಮುಂದೆ ಹೀಗೆ ಮಾಡುವುದಿಲ್ಲ ಎಂದಿದ್ದಾನೆ.
ಇದಾದ ಬಳಿಕ ಅರ್ಜಿಯನ್ನು ಅಲ್ಲಿಯೇ ಇತ್ಯರ್ಥಗೊಳಿಸಿದ ನ್ಯಾಯಾಧೀಶರು ಮಗನಿಗೆ ಇನ್ನೊಮ್ಮೆ ಬುದ್ಧಿ ಹಾಗೂ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ತಮ್ಮ ಮಗನಿಗೆ ಯಾವುದೇ ರೀತಿಯ ಶಿಕ್ಷೆ ಕೊಡಬೇಡಿ ಎಂದು ಅಪ್ಪ ನ್ಯಾಯಾಧೀಶರಲ್ಲಿ ಕೋರಿಕೊಂಡಿದ್ದು, ಇದು ಅಲ್ಲಿ ನೆರೆದಿದ್ದ ಜನರನ್ನು ಭಾವುಕರನ್ನಾಗಿ ಮಾಡಿತು.