

ಮುಂಬೈ: ಸುಪ್ರಸಿದ್ಧ ನಟ ಸುಶಾಂತ್ ರಜಪೂತ್ ಸಾವಿನ ಬಗ್ಗೆ ಇನ್ನು ಹಲವಾರು ಅನುಮಾನುಗಳು ಸುಳಿದಾಡುತ್ತಿರುವ ನಡುವೆಯೇ, ಇನ್ನೊಬ್ಬ ಪ್ರಖ್ಯಾತ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯೇ ರಿಶ್ತೆ ಹೈ ಪ್ಯಾರ್ ಕೆ, 'ಕಹಾನಿ ಘರ್-ಘರ್ ಕಿ' , ಕ್ಯೂಂಕಿ ಸಾಸ್ ಭೀ ಕಭೀ ಬಹೂ ಥಿ... ಮುಂತಾದ ಧಾರಾವಾಹಿಗಳಿಂದ ಮನೆ ಮಾತಾಗಿರುವ ಸಮೀರ್, ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರಿಗೆ 44 ವರ್ಷ ವಯಸ್ಸಾಗಿತ್ತು.
ನಿನ್ನೆ ರಾತ್ರಿ ಇವರ ಶವ ಮನೆಯಲ್ಲಿ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡು ಎರಡು ದಿನವಾಗಿರಬಹುದು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಪೊಲೀಸರು ಮನೆಯೊಳಗೆ ಹೋದಾಗ ಶವ ಕೊಳೆತ ಸ್ಥಿತಿಯಲ್ಲಿರುವುದಾಗಿ ಹೇಳಲಾಗಿದೆ.
ಮನೆಯ ಸೆಕ್ಯುರಿಟಿ ಗಾರ್ಡ್‌ಗೆ ಕಿಟಕಿಯಲ್ಲಿ ಶವ ಫ್ಯಾನ್‌ಗೆ ನೇತಾಡುತ್ತಿರುವುದು ಕಾಣಿಸಿದೆ. ತಕ್ಷಣ ಆತ ಪೊಲೀಸರಿಗೆ ಫೋನ್ ಮಾಡಿದ್ದಾಗ ಪೊಲೀಸರು ಬಂದಾಗಲೇ ವಿಷಯ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಫೆಬ್ರವರಿಯಲ್ಲಿ ಸಮೀಪ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೆಲಸವಿಲ್ಲದೇ ಈ ರೀತಿ ಮಾಡಿಕೊಂಡಿರಬಹುದು ಎಂದು ಅನೇಕ ಮಂದಿ ಹೇಳುತ್ತಿದ್ದರೂ, ವಾಸ್ತವಾಂಶ ಇನ್ನಷ್ಟೇ ಬಯಲಾಗಬೇಕಿದೆ. ಪ್ರಸಿದ್ಧ ಕಿರುತೆರೆ ನಟರಾದ ಪ್ರೇಕ್ಷಾ ಮೆಹ್ತಾ, ಮನಮೀತ್ ಗ್ರೇವಾಲ್ ನಂತರ ಸುಶಾಂತ್ ರಜಪೂತ್ ಹೀಗೆ ಕಿರುತೆರೆ ನಟದ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಎಲ್ಲೆಡೆ ಆತಂಕ ವ್ಯಕ್ತವಾಗಿದೆ.
ಸುಶಾಂತ್ ಸಿಂಗ್ ಅವರ ಸಾವಿನ ನಂತರ ತಮ್ಮ ಟ್ವಿಟರ್‌ನಲ್ಲಿ ಸಮೀರ್ ಮಾನಸಿಕ ಆರೋಗ್ಯದ ಕುರಿತು ಬರೆದಿದ್ದರು ಎನ್ನಲಾಗಿದೆ.