

ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ನಿತ್ಯ ಒಂದಲ್ಲ ಒಂದು ಹೊಸ ಬೆಳವಣಿಗೆಗೆಳಿಗೆ ಸುಶಾಂತ್ ಪ್ರಕರಣ ಎಡೆಮಾಡಿಕೊಡುತ್ತಿದೆ. ರಿಯಾಗೆ ಸಂಬಂಧಿಸಿ ಬೆಳವಣಿಗೆಗಳು ಒಂದೆಡೆ ನಡೆಯುತ್ತಿದ್ದರೆ, ಇತ್ತ ಸುಶಾಂತ್ ಆರೋಗ್ಯದ ಬಗೆಗಿನ ಸುದ್ದಿಗಳು ಹಲವು ಅನುಮಾನಗಳಿಗೆ ಕಾರಣವಾಗುತ್ತಿವೆ. ಇದೀಗ ಪ್ರಕರಣ ಸಿಬಿಐ ಮೆಟ್ಟಿಲೇರುತ್ತಿದ್ದಂತೆ, ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮುಂದಿನ ಮೂರು ದಿನದೊಳಗೆ ಹಾಜರುಪಡಿಸಬೇಕು ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರಿದ್ದ ಏಕಸದಸ್ಯ ಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ. ಜತೆಗೆ ಪ್ರಕರಣವನ್ನು ಬಿಹಾರ ಪೊಲೀಸರಿಂದ ಮುಂಬೈ ಪೊಲೀಸರಿಗೆ ವರ್ಗಾಯಿಸಬೇಕೆಂದು ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಮನವಿಯನ್ನು ಆಲಿಸಿದ್ದರಿಂದ ತನಿಖೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಇದೇ ವೇಳೆ ರಿಯಾಗೆ ಯಾವುದೇ ರೀತಿಯಲ್ಲಿ ರಕ್ಷಣೆ ನೀಡಲಾಗುವುದಿಲ್ಲ ಎಂದೂ ಹೇಳಿದ ಸುಪ್ರೀಂ, ಮುಂದಿನ ವಾರ ಈ ವಿಷಯವನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಿದೆ. ಮುಂಬೈ ಪೊಲೀಸರು ಸಾಕ್ಷ್ಯಗಳನ್ನು ನಾಶಪಡಿಸುವ ಬಗ್ಗೆ ಸುಶಾಂತ್ ಕುಟುಂಬವು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಭರವಸೆ ನೀಡಿದ್ದಾರೆ.
ಅದೇ ರೀತಿ ಪ್ರಕರಣದ ತನಿಖೆಗೆಂದು ಬಮದ ಪಾಟ್ನಾದ ಐಪಿಎಸ್ ಅಧಿಕಾರಿಯನ್ನು ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ಮಾಡಿದೆ. ಸರ್ಕಾರದ ಈ ನಡೆಯನ್ನೂ ಪ್ರಶ್ನಿಸಿರುವ ಸುಪ್ರಿಂ, ಪ್ರಕರಣದ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುವುದರಿಂದ ಇಂತಹ ಕ್ರಮಗಳು ಮತ್ತಷ್ಟು ಅನುಮಾನಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್)