

ಮುಂಬೈ: 'ನಟಿಯರಷ್ಟೇ ಅಂಗಾಂಗ ತೋರಿಸುವುದ್ಯಾಕೆ? ನಾನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ' ಎಂದು ಸಂಪೂರ್ಣವಾಗಿ ಬೆತ್ತಲಾಗಿ ಮ್ಯಾಗಜೀನ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡು ಭಾರಿ ವಿವಾದಕ್ಕೆ ಗುರಿಯಾಗಿರುವ ನಟ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಪೊಲೀಸರ ಎದುರಿಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
ಸಂಪೂರ್ಣ ಬೆತ್ತಲಾದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅವರು ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಈ ಫೋಟೋ ಭಾರಿ ವೈರಲ್ ಆಗುತ್ತಲೇ ಇದು ಹಲವು ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಇವರ ವಿರುದ್ಧ ಮುಂಬೈ ಪೊಲೀಸರಲ್ಲಿ ಕೇಸ್ ಕೂಡ ದಾಖಲಾಗಿದೆ.
ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್ ಅಡಿಯಲ್ಲಿ ಮುಂಬೈನ ಚೆಂಬೂರ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರಿಂದ ರಣವೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟ ಸ್ಪಷ್ಟನೆ ಕೊಟ್ಟಿದ್ದು, ತಮ್ಮ ಫೋಟೋ ತಿರುಚಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರ ಎದುರು ಸ್ಪಷ್ಟನೆ ನೀಡಿರುವ ನಟ, "ನಾನು ಯಾವುದೇ ಫೋಟೋದಲ್ಲಿ ಖಾಸಗಿ ಅಂಗ ಕಾಣಿಸಲಿಲ್ಲ. ನನ್ನ ಫೋಟೋ ತಿರುಚಲಾಗಿದೆ. ಆ ಫೋಟೋದಲ್ಲಿ ಕಾಣಿಸುತ್ತಿರುವ ಆ ಪಾರ್ಟ್ ನನ್ನದಲ್ಲ. ಮೂಲ ಫೋಟೋ ನಾನು ತೋರಿಸಲು ಸಿದ್ಧ" ಎಂದಿದ್ದಾರೆ. ನಟ ಹೇಳಿರುವ ಪ್ರಕಾರ, ನಗ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದರೂ ಖಾಸಗಿ ಅಂಗಗಳನ್ನು ಅವರು ಪ್ರದರ್ಶಿಸಿರಲಿಲ್ಲ. ಖಾಸಗಿ ಅಂಗಕ್ಕೆ ಕೈ ಅಡ್ಡಲಾಗಿ ಹಿಡಿದು ಫೋಟೋಶೂಟ್ ಮಾಡಿಸಲಾಗಿತ್ತು. ಆದರೆ ಈ ಪೈಕಿ ಅವರ ಒಂದು ಫೋಟೋದಲ್ಲಿ ಖಾಸಗಿ ಅಂಗ ಸ್ಪಷ್ಟವಾಗಿ ಕಾಣಿಸುವಂತೆ ಫೋಟೋ ತಿರುಚಿ ಅದನ್ನು ವೈರಲ್ ಮಾಡಲಾಗಿದೆ ಎನ್ನುವುದು.
ಈ ಹಿನ್ನೆಲೆಯಲ್ಲಿ, ಅವರಿಗೆ ಕ್ಲೀನ್ಚಿಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)