ನಟನಿಗೆ ಹುಟ್ಟುಹಬ್ಬದ ವಿಷ್‌ ಮಾಡಹೋಗಿ ಜೀವ ಕಳೆದುಕೊಂಡ ಅಭಿಮಾನಿಗಳು!

pavan kalyan
Published on

ಚಿತ್ತೂರು: ಚಿತ್ರನಟರು ಎಂದರೆ ಅಭಿಮಾನಕ್ಕಿಂತಲೂ ಅಂಧಾಭಿಮಾನ ಹೊಂದಿರುವವರೇ ಹೆಚ್ಚು. ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ಏನು ಮಾಡಲೂ ಸಿದ್ಧ ಎಂದುಕೊಳ್ಳುವವರು ಎಲ್ಲೆಡೆ ಕಾಣಸಿಗುತ್ತಾರೆ. ಆದರೆ ಇದೇ ಅಭಿಮಾನ ಮೂವರು ಅಭಿಮಾನಿಗಳ ಜೀವ ತೆಗೆದಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಇಂದು ತೆಲುಗು ಚಿತ್ರರಂಗದ ನಟ, ರಾಜಕಾರಣಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ

ಅವರ ಪೋಸ್ಟರ್ ಹಾಕಲು ಕೆಲವು ಅಭಿಮಾನಿಗಳು ಮೇಲಕ್ಕೆ ಹತ್ತಿದ್ದರು. ಆ ಪೈಕಿ ವಿದ್ಯುತ್ ತಗುಲಿ ಮೂವರು ಯುವಕರು ಮೃತಪಟ್ಟಿದ್ದಾರೆ. ಚಿತ್ತೂರು ಜಿಲ್ಲೆಯ ಶಾಂತಿಪುರಂ ತಾಲೂಕಿನ ಕನಮಲದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕರೊನಾವೈರಸ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸರಳವಾಗಿರಲಿ ಎಂದು ನಟ-ನಟಿಯರು ಸಾರುತ್ತಿದ್ದಾರೆ, ಜತೆಗೆ ಸರ್ಕಾರಗಳೂ ಇಂಥವುಗಳಿಗೆಲ್ಲಾ ನಿರ್ಬಂಧ ಹೇರಿದೆ. ದೊಡ್ಡ ಕಟೌಟ್, ಪೋಸ್ಟರ್ ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದರ ಹೊರತಾಗಿಯೂ ಇಂಥ ಕೃತ್ಯ ಮಾಡಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಅವರ 40 ಅಡಿ ಎತ್ತರದ ಪೋಸ್ಟರ್ ಹಾಕಲು ಒಟ್ಟು ಏಳು ಮಂದಿ ಯತ್ನಿಸಿದ್ದರು. ಕುಪ್ಪಂನ ಕೃಷ್ಣಗಿರಿ-ಪಾಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟೌಟ್ ದೊಡ್ಡದಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಉದ್ದೇಶವಾಗಿತ್ತು. ಈ ವೇಳೆ ಒಬ್ಬಾತ ಪಕ್ಕದಲ್ಲಿದ್ದ 6.5 ಕೆವಿ ಎಲೆಕ್ಟ್ರಿಕ್ ತಂತಿಯನ್ನು ಮುಟ್ಟಿದ್ದಾನೆ, ನಂತರ ಹತ್ತಿರದಲ್ಲಿದ್ದ ಆತನ ಸೋದರ ಹಾಗೂ ಒಬ್ಬ ಸ್ನೇಹಿತನಿಗೂ ವಿದ್ಯುತ್ ಹರಿದಿದೆ. ಮೂವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ ಎಂದು ಕುಪ್ಪಂ ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ಹೇಳಿದ್ದಾರೆ.

ಮೃತರನ್ನು ಸೋಮಶೇಖರ್ (30), ರಾಜಶೇಖರ್ (32) ಮತ್ತು ಅರುಣಾಚಲಂ (28) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಹರಿಕೃಷ್ಣ, ಪವನ್ ಮತ್ತು ಸುಬ್ರಹ್ಮಣ್ಯಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ತಿಳಿಸಿದರು.

ಘಟನೆಯ ಕುರಿತು ಪವನ್ ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತಮ್ಮ ಜನ ಸೇನಾ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪ್ರಕಟಿಸಿದ್ದಾರೆ. ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಸಂಗೀತಗಾರ ತಮನ್, ನಿರ್ಮಾಪಕ ಬೋನಿ ಕಪೂರ್, ವಕೀಲ್ ಸಾಬ್ ಚಿತ್ರ ತಂಡ ಕೂಡ ವಿಷಾದ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net