

ಮುಂಬೈ: ಬಾಲಿವುಟ್ ನಟ ಅಕ್ಷಯ್ ಕುಮಾರ್‌ಗೆ ಮತ್ತೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿಂದೆ ಕೂಡ ಇವರಿಗೆ ಕರೊನಾ ಕಾಣಿಸಿಕೊಂಡಿತ್ತು. ಈಗ ಎರಡನೆಯ ಬಾರಿ ಸೋಂಕು ತಗುಲಿದೆ. ಈ ಕುರಿತು ಖುದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಈ ಸೋಂಕಿನಿಂದಾಗಿ ಅವರು ಕೇನ್ಸ್ ಫಿಲ್ಮ್ ಫೆಸ್ಟಿವಲ್ ತಪ್ಪಿಸಿಕೊಳ್ಳಲಿದ್ದಾರೆ. ಈ ತಿಂಗಳ 17ರಿಂದ ಫ್ರಾನ್ಸ್‌ನ ಕೇನ್ಸ್‌ನಲ್ಲಿ 75ನೇ ಕೇನ್ಸ್ ಚಲನಚಿತ್ರೋತ್ಸವ ಆರಂಭವಾಗಲಿದೆ. ಮೇ 28ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ನನಗೆ ಈ ಫೆಸ್ಟಿವಲ್‌ಗೆ ಕರೊನಾದಿಂದ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ. ಈ ಕುರಿತು ತುಂಬಾ ನೊಂದುಕೊಂಡು ಬರೆದುಕೊಂಡಿರುವ ಅಕ್ಷಯ್, ‘ನಮ್ಮ ಸಿನಿಮಾ ಕ್ಯಾನೆಸ್ 2022ರ ಇಂಡಿಯನ್ ಪೆವಿಲಿಯನ್‌ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದೆ. ಆದರೆ ಈಗ ಕರೊನಾ ತಗುಲಿದೆ. ಆದ್ದರಿಂದ ವಿಶ್ರಾಂತಿ ಅಗತ್ಯವಾಗಿದೆ’ ಎಂದಿರುವ ಅವರು, . ನನ್ನ ಚಿತ್ರತಂಡಕ್ಕೆ ಶುಭವಾಗಲಿ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರೆಹೆಮಾನ್, ಆರ್ ಮಾದವನ್ ನವಾಜುದ್ದೀನ್ ಸಿದ್ದಿಕಿ, ನಯನತಾರಾ ತಮನ್ನಾ ಭಾಟಿಯಾ, ಶೇಖರ್ ಕಪೂರ್, ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್ ಜೋಶಿ, ರಿಕಿ ಕೇಜ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ.
2021ರ ಏಪ್ರಿಲ್ ತಿಂಗಳಿನಲ್ಲಿ ಅಕ್ಷಯ್ ಕುಮಾರ್‌ಗೆ ಸೋಂಕು ತಗುಲಿತ್ತು.