

ರಂಟಚಿಂತಲ (ಆಂಧ್ರ ಪ್ರದೇಶ): ಅಯೋಧ್ಯೆಗೆ ಹೊರಟ ಬೀದರ್‌ನ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಿನ್ನೆ ಭಾನುವಾರವಷ್ಟೇ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ವಾಪಸಾಗುತ್ತಿದ್ದ ವಾಹನ ಅಪಘಾತವಾಗಿದ್ದು ಏಳು ಮಂದಿ ಮೃತಪಟ್ಟಿದ್ದಾರೆ.
ಇಲ್ಲಿನ ರಂಟಚಿಂತಲ ಗ್ರಾಮದ ಕುಟುಂಬ ಸದಸ್ಯರು ಇದ್ದ ಟಾಟಾ ಏಸ್ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಮೃತರ ಸಂಖ್ಯೆಯಲ್ಲಿ ಏರಿಕೆ ಆಗಿದೆ.
ಕೋಟೇಶ್ವರಿ (45), ರೋಶಮ್ಮ (65), ರಮಾದೇವಿ (50), ಕೋಟಮ್ಮ (70), ರಮಣ (50) ಮತ್ತು ಲಕ್ಷ್ಮೀನಾರಾಯಣ (35) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗುಂಟೂರು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಪ್ರದೇಶ ಕಗ್ಗತ್ತಲಿನಿಂದ ಕೂಡಿದ್ದು, ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಲಾರಿ ನಿಂತಿದ್ದು ಕಾಣಿಸದೇ ಚಾಲಕ ಬಂದು ಗುದ್ದಿದ್ದಾನೆ ಎನ್ನಲಾಗಿದೆ.