ಭೀಕರ ಅಪಘಾತ: ಟ್ರಕ್‌ ರಭಸಕ್ಕೆ ನಜ್ಜುಗುಜ್ಜಾದ ಕಾರು: ಒಂದೇ ಕುಟುಂಬದ ನಾಲ್ವರ ದುರ್ಮರಣ

accident
Published on

ಬಿಲ್ವಾರ (ರಾಜಸ್ಥಾನ) : ಕಾರು ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ರಾಜಸ್ಥಾನದ 79ನೇ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

ಬಿಲ್ವಾರ ಜಿಲ್ಲೆಯ ಬೇರಾ ಛೇದಕ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ನಜ್ಜುಗುಜ್ಜಾಗಿದೆ. ಮೃತಪಟ್ಟವರನ್ನು ದೇವಿಲಾಲ್ ಅವರು, ಪತ್ನಿ, ಮಗ ಮತ್ತು ಮಗಳು ಎಂದು ಗುರುತಿಸಲಾಗಿದೆ. ಇವರು ರಾಜಸಮಂದ್ ಜಿಲ್ಲೆಯ ರೈಲ್‌ಮಾಂಗ್ರಾ ಪ್ರದೇಶದ ಅಮರಪುರ ಗ್ರಾಮದ ನಿವಾಸಿಗಳು. ಈ ಕುಟುಂಬವು ಕಾರಿನಲ್ಲಿ ಜೈಪುರದಿಂದ ಅಮರಪುರಕ್ಕೆ ಹೋಗುತ್ತಿತ್ತು.

ಎರಡೂ ವಾಹನಗಳು ಅತಿವೇಗವಾಗಿ ಚಲಿಸುತ್ತಿದ್ದವು. ಇದರಿಂದ ಮುಖಾಮುಖಿಯಾದಾಗ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಡಿಕ್ಕಿಯ ರಭಸಕ್ಕೆ ಕಾರು ಸ್ಫೋಟಗೊಂಡಿದ್ದು, ಟ್ರಕ್ ಕೂಡ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ ಶವಗಳನ್ನು ಹರಸಾಹಸಪಟ್ಟು ಹೊರಕ್ಕೆ ತೆಗೆಯಲಾಗಿದೆ.

ಸಂಬಂಧಿಕರು ಬಂದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net