

ನವದೆಹಲಿ: ಯಾವುದೇ ಪ್ರತಿಭಟನೆಗಳು ನಡೆದಾಗ, ಅದರ ದುರ್ಲಾಭ ಪಡೆದು ಕೆಲವು ಕಿಡಿಗೇಡಿಗಳು ಹೀನಾಯಕೃತ್ಯಕ್ಕೆ ಇಳಿಯುವುದು ಇಂದಿನ ದಿನಗಳಲ್ಲಿ ಮಾಮೂಲಾಗಿದೆ.
ಅದೇ ರೀತಿ ನೂತನ ಕೃಷಿ ಕಾನೂನಿನ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್ ಬಳಿ ಕಿಡಿಗೇಡಿಗಳು ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಸುಮಾರು 15-20 ಮಂದಿಯ ಗುಂಪು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬೆಂಕಿಗಾಹುತಿಯಾಗಿರುವ ಟ್ರ್ಯಾಕ್ಟರ್ ಅನ್ನು ತೆರವುಗೊಳಿಸಿರುವ ಪೊಲೀಸರು ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಸಿಬಳಿಯುವ ಯತ್ನ ಇದಾಗಿರುವುದಾಗಿ ಹಲವರು ಆರೋಪಿಸಿದ್ದಾರೆ.
ತಮ್ಮ ಜೀವನಾಧಾರವಾಗಿರುವ ಟ್ರ್ಯಾಕ್ಟರ್ ಅನ್ನು ಯಾವುದೇ ಕಾರಣಕ್ಕೂ ಪ್ರತಿಭಟನಾನಿರತ ರೈತರು ಸುಡಲು ಸಾಧ್ಯವೇ ಇಲ್ಲ. ರೈತರ ಪರವಾಗಿರುವ ಕಾನೂನಿನ ವಿರುದ್ಧ ಇಲ್ಲಸಲ್ಲದ ಗುಲ್ಲು ಹಬ್ಬಿಸಿರುವ ಕೆಲವು ಕುತಂತ್ರ ಬುದ್ಧಿಯವರು ರೈತರ ತಲೆಯನ್ನು ತಿರುಗಿಸಿದ್ದಾರೆ. ಈ ಕಿಡಿಗೇಡಿಗಳೇ ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿರುವುದು ಎಂದು ಆರೋಪಗಳು ಕೇಳಿಬಂದಿವೆ.
ಈ ಮಧ್ಯೆಯೇ ಇಂಥ ಹಿಂಸಾಚಾರಕ್ಕೆ ಕೆಲವು ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂದು ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ.