

ಬೆಂಗಳೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾಗಿ ತೀವ್ರ ಬೇಸರಗೊಂಡಿದ್ದ ಶಾಸಕ ಎಸ್.ಎ. ರಾಮದಾಸ್ ಅವರ ಮನವೊಲಿಸುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದು, ಇದೀಗ ಪಕ್ಷದಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾರೆ.
‘30 ವರ್ಷಗಳಿಂದ ಇದ್ದ ತಾಯಿ ಮನೆ(ಬಿಜೆಪಿ)ಯಿಂದ ಓಡಿಸಿದ್ದಾರೆ, ಹಾಗಾಗಿ ಆ ಮನೆಯಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದನ್ನು ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ’ ಎಂದು ರಾಮದಾಸ್ ಸೋಮವಾರ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮದಾಸ್ ಪಕ್ಷ ತೊರೆದು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಅಥವಾ ಬೇರೆ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ಕುತುಹಲ ಮೂಡಿತ್ತು.
ವಿದ್ಯಾರಣ್ಯಪುರಂ ಉದ್ಯಾನದಲ್ಲಿ ಮಂಗಳವಾರ ಸಂಜೆ ಕಾರ್ಯಕರ್ತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಮದಾಸ್ ನಂತರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿಲುವು ಪ್ರಕಟಿಸಿದರು. ‘ಟಿಕೆಟ್ ಪಡೆಯುವ ವಿಚಾರದಲ್ಲಿ ನಾನು ಪಕ್ಷದ ವರಿಷ್ಠರನ್ನು ಅರ್ಥ ಮಾಡಿಸುವಲ್ಲಿ ಸೋತಿದ್ದೇನೆ, ಪಕ್ಷದ ವರಿಷ್ಠರು ಪಕ್ಷ ನೀತಿಯನ್ನು ನನಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಘೋಷಿತ ಅಭ್ಯರ್ಥಿ ಏ.20 ರಂದು ನಾಮಪತ್ರ ಸಲ್ಲಿಸಲಿದ್ದು, ಅವರ ನಾಮಪತ್ರ ಸಂದರ್ಭ ಪಾಲ್ಗೊಳ್ಳುತ್ತೇನೆ' ಎಂದರು.
ಕೃಷ್ಣರಾಜ ಕ್ಷೇತ್ರದಲ್ಲಿ ಈ ಬಾರಿ ಯಾರು ಗೆಲುವು ಸಾಧಿಸುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ‘ಯಾರಿಗೆ ಮತದಾರರು ಆಶೀರ್ವಾದ ಮಾಡುತ್ತಾರೋ ಅವರು ಗೆಲ್ಲುತ್ತಾರೆ’ ಎಂದು ಹೇಳಿದರು. ಆದರೆ ರಾಮದಾಸ್ ಎಲ್ಲೂ ಕೂಡ ಪಕ್ಷದ ಘೋಷಿತ ಅಭ್ಯರ್ಥಿ ಹೆಸರು ಪ್ರಸ್ತಾಪಿಸುವುದಾಗಲಿ ಅವರ ಗೆಲುವಿನ ಕುರಿತು ಚಕಾರ ಎತ್ತದೆ ಇರುವುದು ಅಚ್ಚರಿ ಮೂಡಿಸಿದೆ.