

ಪಟ್ನಾ (ಬಿಹಾರ್): ದೇಶದಲ್ಲಿ ಎಲ್ಲಿ ನೋಡಿದರೂ ಈಗ ಕೋಮು ಸೌಹಾರ್ದತೆ ಹದಗೆಡುವ ವಾತಾವರಣ ಸೃಷ್ಟಿಯಾಗಿದೆ. ಹಿಂದೂ-ಮುಸ್ಲಿಮರ ನಡುವೆ ದ್ವೇಷದ ವಾತಾವರಣ ರಾರಾಜಿಸುತ್ತಿದೆ. ಇವುಗಳ ನಡುವೆ ಬಿಹಾರ್ನ ಪಟ್ನಾ ಇದೀಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಈ ಎರಡು ಕೋಮುಗಳ ನಡುವೆ ಇರುವ ಸೌಹಾರ್ದ ವಾತಾವರಣ
75 ವರ್ಷದ ರಾಮ್‌ದೇವ್ ಎಂಬ ವ್ಯಕ್ತಿ ಮೃತಪಟ್ಟಾಗ ಇವರ ಶವಕ್ಕೆ ಹೆಗಲು ನೀಡಿದ್ದು ಇವರ ಮುಸ್ಲಿಂ ಸ್ನೇಹಿತರು. 25 ವರ್ಷಗಳ ಕಾಲ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದ ರಾಮ್‌ದೇವ್ ಅವರು ಮೃತಪಟ್ಟಾಗ ಹಿಂದೂ ಸಂಸ್ಕೃತಿಯ ವಿಧಿವಿಧಾನದಂತೆ ಅವರ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ ಈ ಮುಸ್ಲಿಂ ಸ್ನೇಹಿತರು.
ಶವಯಾತ್ರೆ ಸಮಯದಲ್ಲಿ ಮೃತದೇಹಕ್ಕೆ ಹೆಗಲು ಕೊಟ್ಟು ‘ರಾಮ್ ನಾಮ್ ಸತ್ಯ ಹೈ’ ಎಂಬ ಘೋಷಣೆಗಳೊಂದಿಗೆ ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗಲಾಗಿದೆ. ಹಿಂದೂ ಸಂಪ್ರದಾಯದಂತೆ ರಾಮನ ಘೋಷಣೆಯನ್ನು ಮುಸ್ಲಿಂ ಸ್ನೇಹಿತರು ಮಾಡಿ ಆರತಿ ಬೆಳಗಿದ್ದಾರೆ. ರಾಜಾ ಬಜಾರ್‌ನ ಮುಸ್ಲಿಂ ಕುಟುಂಬದ ಈ ಕಾರ್ಯಕ್ಕೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಈ ಮುಸ್ಲಿಂ ಕುಟುಂಬವು ಅಂತ್ಯಕ್ರಿಯೆಯಲ್ಲಿ ರಾಮ್ ನಾಮ ಸತ್ಯವನ್ನು ಹೇಳಿದ್ದು ಮಾತ್ರವಲ್ಲದೆ ಪೂರ್ಣ ವಿಧಿವಿಧಾನಗಳೊಂದಿಗೆ ಅಂತಿಮ ವಿಧಿಗಳನ್ನು ಸಹ ಮಾಡಿದೆ. ಪಾಟ್ನಾದ ಸಮನ್‌ಪುರ ಪ್ರದೇಶದಲ್ಲಿ ನೆಲೆಸಿರುವ ಮುಸ್ಲಿಂ ಕುಟುಂಬಸ್ಥರು ಭೂಮಿಯನ್ನು ಅಲಂಕರಿಸಿ, ಹೆಗಲು ಕೊಟ್ಟು ನಂತರ ಹಿಂದೂ ವ್ಯಕ್ತಿಯನ್ನು ಪಾಟ್ನಾದ ಗಂಗಾ ಘಾಟ್‌ಗೆ ಕರೆದೊಯ್ದು ಅಂತಿಮ ಸಂಸ್ಕಾರಕ್ಕಾಗಿ ರಾಮ ನಾಮವನ್ನೂ ಜಪಿಸಿದ್ದಾರೆ.
ಸುಮಾರು 25 ರಿಂದ 30 ವರ್ಷಗಳ ಹಿಂದೆ ರಾಮದೇವ್ ಎಂಬ ವ್ಯಕ್ತಿ ಎಲ್ಲಿಂದಲೋ ಅಲೆದಾಡಿಕೊಂಡು ರಾಜಾ ಬಜಾರ್‌ನ ಸಮನ್‌ಪುರಕ್ಕೆ ಬಂದಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಅವರಿಗೆ ಬೇರೆ ಸಂಬಂಧಿಕರೂ ಇರಲಿಲ್ಲ. ಆಗ ಈ ಮುಸ್ಲಿಂ ಕುಟುಂಬ ಅವರಿಗೆ ಬೆಂಬಲ ನೀಡಿತ್ತು.
ಮೊಹಮ್ಮದ್ ಅರ್ಮಾನ್ ಅವರನ್ನು ತನ್ನ ಅಂಗಡಿಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಅಂದಿನಿಂದ ರಾಮದೇವ್ ಈ ಕುಟುಂಬದ ಭಾಗವಾಗಿ ಬದುಕಿದರು. ಈಗ ಅದೇ ಮುಸ್ಲಿಂ ಸಮಾಜದ ಕುಟುಂಬ, ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ ಮಾಡಿದೆ. ಈ ಸಂಸ್ಕಾರದಲ್ಲಿ ಮೊಹಮ್ಮದ್ ರಿಜ್ವಾನ್ ಅಂಗಡಿ ಮಾಲೀಕ ಮೊಹಮ್ಮದ್ ಅರ್ಮಾನ್ ಮೊಹಮ್ಮದ್ ರಶೀದ್ ಮತ್ತು ಮೊಹಮ್ಮದ್ ಇಝಾರ್ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದನ್ನು ಅಲ್ಲಿಯ ಜನರು ಕುತೂಹಲದಿಂದ ವೀಕ್ಷಿಸಿದರು.