VIDEO: ಚಿನ್ನ ಬೇಡ.. ದುಡ್ಡು ಬೇಡ... ಒಂದು ಲಕ್ಷ ಮೌಲ್ಯದ ಪುಸ್ತಕ ಕೊಟ್ಟುಬಿಡಿ ಎಂದ ಪಾಕ್​ ವಧು

pak-book
Published on

ಇಸ್ಲಾಮಾಬಾದ್: ಸಾಮಾನ್ಯವಾಗಿ ಮದುವೆ ಎಂದಾಕ್ಷಣ ಭಾರತದ ಹಲವು ಪಂಗಡಗಳಲ್ಲಿ ವರದಕ್ಷಿಣೆ ನೀಡಿದರೆ, ಮುಸ್ಲಿಂ ಧರ್ಮದಲ್ಲಿ ವಧುದಕ್ಷಿಣೆ (ಹಖ್​ ಮೆಹರ್​) ನೀಡಲಾಗುತ್ತದೆ.

ಆದರೆ ಇಲ್ಲೊಬ್ಬ ಪಾಕಿಸ್ತಾನದ ವಧುವೀಗ ಸ್ವಲ್ಪ ವಿಭಿನ್ನ ರೀತಿಯ ವಧುದಕ್ಷಿಣೆ ಕೋರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಾಯಕಿ ಎನಿಸಿಕೊಂಡಿದ್ದಾರೆ. ಈಕೆಯ ಹೆಸರು ನೈಲಾ ಶಮಲ್​​. ತನಗೆ ಹಖ್​ ಮೆಹರ್​ ರೂಪದಲ್ಲಿ ಯಾವುದೇ ಚಿನ್ನಾಭರಣವಾಗಲೀ, ದುಡ್ಡಾಗಲೀ ಬೇಡವೇ ಬೇಡ. ಬದಲಿಗೆ ನನಗೆ ಒಂದು ಲಕ್ಷ ಪಾಕಿಸ್ತಾನ ರೂಪಾಯಿ (ಸುಮಾರು 46,600 ರೂಪಾಯಿ) ಮೌಲ್ಯದ ಪುಸ್ತಕ ನೀಡಿ ಎಂದು ಕೋರಿದ್ದಾರೆ.

ಅಷ್ಟಕ್ಕೂ ಇಂಥದ್ದೊಂದು ಬೇಡಿಕೆ ಇಡಲು ಕಾರಣಗಳನ್ನು ನೀಡಿದ್ದಾರೆ ನೈಲಾ. ಮದುಮಗಳ ವಸ್ತ್ರ ಧರಿಸಿ ವಿಡಿಯೋ ಮೂಲಕ ತಮ್ಮ ಈ ಹೊಸ ಬೇಡಿಕೆಯ ಕುರಿತು ವಿವರಿಸಿರುವ ಅವರು, ನಾನು ಹಖ್​ ಮೆಹರ್ ಪಿಕೆಆರ್ ಒಂದು ಲಕ್ಷ ಮೌಲ್ಯದ ಪುಸ್ತಕಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ. ಸದ್ಯದಲ್ಲಿ ಪಾಕಿಸ್ತಾನದಲ್ಲಿ ಇರುವ ಸ್ಥಿತಿಯಿಂದ ದುಬಾರಿ ಉಡುಗೊರೆಗಳನ್ನು ಖರೀದಿಸಲು ಆಗುತ್ತಿಲ್ಲ. ಆದ್ದರಿಂದ ಹಣ, ಚಿನ್ನಾಭರಣವೆಲ್ಲಾ ಬೇಡ ಎಂದಿದ್ದಾರೆ.

ಅದಕ್ಕೂ ಮುಖ್ಯವಾಗಿರುವ ಇನ್ನೊಂದು ಕಾರಣ ನೈಲಾ ನೀಡಿರುವುದು ಏನೆಂದರೆ, ಇಂಥದ್ದೊಂದು ವಧು ದಕ್ಷಿಣೆಯ ಪದ್ಧತಿಯನ್ನು ನಾವು ತೊಡೆದು ಹಾಕಬೇಕಿದೆ. ಆದ್ದರಿಂದ ನಾನು ಚಿನ್ನ, ಹಣದ ಬದಲು ಹೊಸ ಟ್ರೆಂಡ್ ಸೃಷ್ಟಿ ಮಾಡುವುದಾಗಿ ಹೇಳಿದ್ದಾರೆ.

ಅಷ್ಟಕ್ಕೂ ನೈಲಾ ಪುಸ್ತಕದ ಬೇಡಿಕೆ ಇಟ್ಟಿರಲು ಕಾರಣ, ಇವರೊಬ್ಬ ಲೇಖಕಿ. ನಾನು ಓರ್ವ ಬರಹಗಾತಿಯಾಗಿದ್ದು ಪುಸ್ತಕಗಳಿಗೆ ಬೆಲೆ ನೀಡಲಿಲ್ಲ ಎಂದರೆ ಸಾಮಾನ್ಯ ಜನರು ಹೇಗೆ ಪುಸ್ತಕಗಳಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿರುವ ಅವರು, ಇದೇ ರೀತಿ ಎಲ್ಲರೂ ಚಿನ್ನ, ದುಡ್ಡಿನ ಬದಲು ಪುಸ್ತಕದ ಮೊರೆ ಹೋಗುವಂತೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net