ಫೋನ್​ನಲ್ಲಿ ಹಾರರ್​ ಮೂವಿ ನೋಡುತ್ತಲೇ ಗೊಂಬೆಗೆ ನೇಣು ಬಿಗಿದು, ತಾನೂ ಸತ್ತುಹೋದ ಬಾಲಕ!

horror
Published on

ಪುಣೆ: ಸ್ಮಾರ್ಟ್​ಫೋನ್​ಗಳು ಮಕ್ಕಳ ಕೈಯಲ್ಲಿ ಇರುವುದು ಎಷ್ಟು ಭಯಾನಕ ಎನ್ನುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಸ್ಮಾರ್ಟ್​ಫೋನ್​ನಲ್ಲಿ ಸದಾ ಹಾರರ್​ ಚಿತ್ರ ನೋಡುತ್ತಿದ್ದ ಎಂಟು ವರ್ಷದ ಬಾಲಕನೊಬ್ಬ ಗೊಂಬೆಗೆ ನೇಣು ಹಾಕಿ, ತಅನೂ ನೇಣು ಬಿಗಿದುಕೊಂಡಿರುವ ಆತಂಕಕಾರಿ ಘಟನೆ ಪುಣೆಯಲ್ಲಿ ನಡೆದಿದೆ.

ಕಮಲ್ ಖೇಮ್ ಸೌದ್ ಎಂಬ ಬಾಲಕ ನೇಣು ಹಾಕಿಕೊಂಡಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಈತ ಸದಾ ಮೊಬೈಲ್​ ಫೋನ್​ನಲ್ಲಿ ಇರುತ್ತಿದ್ದ. ಅದರಲ್ಲಿ ಹಾರರ್​ ಮೂವಿಗಳನ್ನು ವೀಕ್ಷಿಸುತ್ತಿದ್ದ. ಈ ಬಗ್ಗೆ ಪಾಲಕರು ಅಷ್ಟೆಲ್ಲಾ ಗಮನಿಸಿಯೇ ಇರಲಿಲ್ಲ.

ಇವನ ಅಪ್ಪ ಕೆಲಸಕ್ಕೆಂದು ಹೊರಗಡೆ ಹೋಗಿದ್ದಾಗ, ಅಮ್ಮ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಬಾಲಕ ಪುನಃ ಹಾರರ್​ ಮೂವಿ ನೋಡಿದ್ದಾನೆ. ಸಾಮಾನ್ಯವಾಗಿ ಇಂಥ ಭಯಾನಕ ಚಲನಚಿತ್ರಗಳಲ್ಲಿ ಗೊಂಬೆಗಳನ್ನು ತೋರಿಸಲಾಗುತ್ತದೆ. ಹಾಗೆಯೇ ಬಾಲಕ ನೋಡಿದ್ದ ಚಿತ್ರದಲ್ಲಿ ಗೊಂಬೆಗೆ ನೇಣು ಹಾಕುವ ದೃಶ್ಯವಿತ್ತು. ಇದು ಏನು ಎಂದು ಅರಿಯದ ಬಾಲಕ ಗೊಂಬೆಯ ಮುಖಕ್ಕೆ ಕಪ್ಪು ಬಟ್ಟೆಯನ್ನು ಸುತ್ತಿ ಅಲ್ಲಿಯೇ ಇದ್ದ ಹಗ್ಗದಿಂದ ನೇಣು ಹಾಕಿದ್ದಾನೆ, ನಂತರ ತಾನು ಏನು ಮಾಡುತ್ತಿದ್ದೇನೆ ಎನ್ನುವ ಅರಿವು ಇಲ್ಲದೇ ಕಿಟಕಿಗೆ ತಾನೂ ನೇಣು ಬಿಗಿದುಕೊಂಡಿದ್ದಾನೆ. ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ತಾಯಿ ಕೋಣೆಗೆ ಬಂದಾಗಲೇ ಈ ಕೃತ್ಯದ ಬಗ್ಗೆ ಗೊತ್ತಾಗಿದೆ. ಮಗನ ಸಮೀಪ ಬರುವಷ್ಟರಲ್ಲಿಯೇ ಆತ ಪ್ರಾಣ ಬಿಟ್ಟಿದ್ದ. ನಂತರ ಮೊಬೈಲ್​ ಪರಿಶೀಲಿಸಿದಾಗ ಆತ ಹಾರರ್​ ಮೂವಿ ನೋಡುತ್ತಿದ್ದುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net