48 ಸಾವಿರ ಕೊಳೆಗೇರಿ ತೆರವು ಮಾಡಿ, ರಾಜಕೀಯ ಪ್ರವೇಶ ಬೇಡ: ಇದು ‘ಸುಪ್ರೀಂ’ ಆದೇಶ

slum
Published on

ನವದೆಹಲಿ: ಮಹಾನಗರಗಳಲ್ಲಿ ಕೊಳೆಗೇರಿಗಳ ಸಂಖ್ಯೆಯಂತೂ ಹೇಳತೀರದು. ಅದರಲ್ಲಿಯೂ ರಾಷ್ಟ್ರ ರಾಜಧಾನಿಯಲ್ಲಿ ಇವುಗಳು ಸಂಖ್ಯೆ ವಿಪರೀತವಾಗಿದೆ.

ಇದೀಗ ಸುಮಾರು 48 ಸಾವಿರ ಕೊಳೆಗೇರಿ ನಿವಾಸಿಗಳಿಗೆ ಶಾಕ್‌ ಎನ್ನುವಂಥ ಆದೇಶವೊಂದು ಸುಪ್ರೀಂಕೋರ್ಟ್‌ನಿಂದ ಹೊರಬಂದಿದೆ. ಅದೇನೆಂದರೆ, ದೆಹಲಿಯಲ್ಲಿ ರೈಲ್ವೆ ಹಳಿಯ 140 ಕಿ.ಮೀ ಅಂತರದಲ್ಲಿರುವ ಕೊಳೆಗೇರಿಗಳನ್ನು ಮೂರು ತಿಂಗಳ ಅವಧಿಯಲ್ಲಿ ತೆರವುಗೊಳಿಸಬೇಕು ಎಂದು ಕೋರ್ಟ್‌ ಹೇಳಿದೆ.

ಇದರಿಂದಾಗಿ ಸುಮಾರು 48 ಸಾವಿರ ಕೊಳೆಗೇರಿಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದವಿರಬಾರದು ಎಂದೂ ಕೋರ್ಟ್‌ ಸರ್ಕಾರಕ್ಕೆ ಖಡಕ್‌ ವಾರ್ನಿಂಗ್‌ ನೀಡಿದೆ.

ಅಷ್ಟೇ ಅಲ್ಲದೇ, ಈ ಪ್ರದೇಶದಲ್ಲಿ ಇರುವ ಕೊಳೆಗೇರಿಗಳ ತೆರವಿಗೆ ಯಾರಾದರೂ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡದಂತೆಯೂ ಹೈಕೋರ್ಟ್‌ಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ, ಸೂಚನೆ ನೀಡಿದೆ. ಒಂದು ವೇಳೆ ಇದಾಗಲೇ ತೆರವು ಪ್ರಕ್ರಿಯೆಗೆ ಏನಾದರೂ ತಡೆಯಾಜ್ಞೆ ಇದ್ದಲ್ಲಿ ಅದು ಊರ್ಜಿತವಾಗುವುದಿಲ್ಲ ಎಂದೂ ಹೇಳಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಕೋರ್ಡ್‌ ಈ ಆದೇಶ ಹೊರಡಿಸಿದೆ. ಈ ಪ್ರದೇಶದ ಅತಿಕ್ರಮಣ ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ತಿಂಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net