

ನವದೆಹಲಿ: ಈ ಬಾರಿ ಬಿಸಿಲು ಬಹುತೇಕ ರಾಜ್ಯಗಳ ಜನರನ್ನು ಹೈರಾಣು ಮಾಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ 122 ವರ್ಷಗಳ ಬಳಿಕ ಭಾರತ ದೇಶದಲ್ಲಿ ಅಧಿಕ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದಾದ್ಯಂತ ಸರಾಸರಿ ಗರಿಷ್ಠ ತಾಪಮಾನವು 33.1 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ, ಇದು ಸಾಮಾನ್ಯಕ್ಕಿಂತ ಸುಮಾರು 1.86 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.
ಕರ್ನಾಟಕದ ಕೆಲವೇ ಕೆಲವು ಊರುಗಳಲ್ಲಿ ಕೆಲ ದಿನಗಳಿಂದ ಆಗಾಗ್ಗೆ ವರುಣ ಕೃಪೆ ತೋರಿದರೂ ಹಲವು ಕಡೆಗಳಲ್ಲಿ ಹೊರಗೆ ಬರಲು ಜನರು ಭಯಪಡುವಷ್ಟು ರೀತಿಯಲ್ಲಿ ಬಿಸಿಲಿನ ತಾಪಮಾನ ಏರಿದೆ. ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಈಗಲೂ ಬಿಸಿಲಿನ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇದೆ.
ಮಹಾರಾಷ್ಟ್ರದಲ್ಲಿ ಕೂಡ ಈ ಬಾರಿ ಹಿಂದೆಂದಿಗಿಂತಲೂ ಭೀಕರ ಸ್ವರೂಪದಲ್ಲಿ ಸೂರ್ಯ ಮುನಿಸಿಕೊಂಡಿದ್ದು, ಬಿಸಿಲಿಗೆ ಇದಾಗಲೇ ಕನಿಷ್ಠ 25 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಅಂದರೆ ಎರಡೇ ತಿಂಗಳಿನಲ್ಲಿ ಈ ಪರಿಯಲ್ಲಿ ಬಿಸಿಲು ಜನರನ್ನು ಬಲಿ ಪಡೆದುಕೊಂಡಿದೆ.
ಮಹಾರಾಷ್ಟ್ರದ ಹಲವು ಭಾಗದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 2016 ರಿಂದ ಈವರೆಗೆ ವರದಿಯಾದ ಅತಿ ಹೆಚ್ಚು ಸಾವಾಗಿದೆ. ಪೂರ್ವ ರಾಜ್ಯ ಒಡಿಶಾದಲ್ಲಿ, ಏಪ್ರಿಲ್ 25 ರಂದು 64 ವರ್ಷದ ವ್ಯಕ್ತಿಯೊಬ್ಬರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ. ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.