

ನವದೆಹಲಿ: ಇಂದು 26/11. ಅಂದರೆ ಮುಂಬೈ ದಾಳಿಗೆ ಇಂದಿಗೆ 12 ವರ್ಷಗಳು. ಈ ಘಟನೆಯನ್ನು 170 ಮಂದಿ ಮೃತಪಟ್ಟಿದ್ದರು.
ಇದಾಗ ಮೇಲೆ 2016ರಲ್ಲಿ ಪಠಾಣಾಕೋಟ್ ವಾಯುನೆಲೆಯ ಮೇಲೆ ದಾಳಿ ಭೀಕರ ದಾಳಿ ನಡೆದಿತ್ತು. ಇವೆರಡೂ ದಾಳಿಗಳ ಹಿಂದೆ ಇದ್ದದ್ದು ಪಾಕಿಸ್ತಾನದ ಉಗ್ರ ಸಂಘಟನೆಗಳು.
ಆದರೆ ಅಲ್ಲಿಂದ ಇಲ್ಲಿವರೆಗೂ ತನ್ನ ನೆಲದಲ್ಲಿ ಉಗ್ರರಿಗೆ ನೆಲೆಯಿಲ್ಲ ಎಂದು ಪಾಕಿಸ್ತಾನ ಸಾರುತ್ತಲೇ ಬಂದಿದೆ. ಆದರೆ ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಾ ಬಂದಿರುವ ಸತ್ಯ ಮಾತ್ರ ಎಲ್ಲರಿಗೂ ತಿಳಿದದ್ದೇ.
ಇಂಥ ಪಾಕಿಸ್ತಾನಕ್ಕೆ ಭಾರತ ಮಾತ್ರವಲ್ಲದೇ ಅಮೆರಿಕ ಕೂಡ ಇಂದು ಸವಾಲು ಎಸಿದಿದೆ. ಮುಂಬೈ ದಾಳಿಗೆ 12 ವರ್ಷವಾಗಿರುವ ಇಂದಿನ ದಿನವನ್ನೇ ಇಟ್ಟುಕೊಂಡು ಪಾಕಿಸ್ತಾನಕ್ಕೆ ಸವಾಲು ಹಾಕಿರುವ ಅಮೆರಿಕ ಮತ್ತು ಭಾರತ, ಒಂದು ವೇಳೆ ತನ್ನ ನೆಲದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಅವಕಾಶ ಇಲ್ಲ ಎಂಬುದನ್ನು ಪಾಕಿಸ್ತಾನ ಸಾಬೀತು ಮಾಡಲು ಇದು ಒಳ್ಳೆಯ ಅವಕಾಶ. ಮುಂಬೈ ಭಯೋತ್ಪಾದಕ ದಾಳಿ ಹಾಗೂ ಪಠಾಣ್ ಕೋಟ್ ಉಗ್ರ ದಾಳಿಯ ಹಿಂದಿನ ರೂವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಈ ಮೂಲಕ ಉಗ್ರರಿಗೆ ಪಾಕ್ನಲ್ಲಿ ಜಾಗ ಇಲ್ಲ ಎನ್ನುವುದನ್ನು ಸಾಬೀತು ಮಾಡಿ ಎಂದು ಉಭಯ ದೇಶಗಳು ಸವಾಲು ಹಾಕಿವೆ.
ಭಾರತ, ಅಮೆರಿಕ ಭಯೋತ್ಪಾದಕ ನಿಗ್ರಹ ಕಾರ್ಯಪಡೆ ಜಂಟಿಯಾಗಿ ನೀಡಿರುವ ಪ್ರಕಟಣೆಯಲ್ಲಿ, ನಿಮ್ಮ ನೆಲದಲ್ಲಿ ಭಯೋತ್ಪಾದಕರಿಗೆ ಯಾವುದೇ ಅವಕಾಶ ಇಲ್ಲ ಎಂಬುದನ್ನು ಸಾಬೀತುಪಡಿಸಲು ತಕ್ಷಣವೇ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 26/11 ಮುಂಬೈ ಹಾಗೂ ಪಠಾಣ್ ಕೋಟ್ ದಾಳಿಯ ರೂವಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕಾಗಿದೆ ಎಂದು ತಿಳಿಸಿದೆ.
ಆದ್ದರಿಂದ ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ತಮ್ಮ ಮಾತನ್ನು ಸಮರ್ಥನೆ ಮಾಡಿಕೊಳ್ಳಲು ಭಯೋತ್ಪಾದರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದ್ದಾರೆ ಕಾದುನೋಡಬೇಕಿದೆ.
26/11 ಘಟನೆಯ ನಂತರ ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಅಮೆರಿಕ ಜಂಟಿಯಾಗಿ ಹೋರಾಡಲು ನಿರ್ಧರಿಸಿದ್ದವು. ಗಡಿ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸಲು ಉಭಯ ದೇಶಗಳ ಮಾತುಕತೆ ವೇಳೆ ಪ್ರಸ್ತಾಪಿಸಲಾಗಿತ್ತು. ಅಲ್ಲದೇ ಆಲ್ ಖೈದಾ, ಐಸಿಸ್, ಪಾಕಿಸ್ತಾನ ಮೂಲದ ಲಷ್ಕರ್, ಜೈಷ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದವು.