ಭೂಮಿಗೆ ಅಪ್ಪಳಿಸಲಿದೆ ಭಯಾನಕ ಕ್ಷುದ್ರಗ್ರಹ- ಪ್ರಪಂಚಕ್ಕೇ ಅಪಾಯ ಕಾದಿದೆ ಎಂದ ವಿಜ್ಞಾನಿಗಳು

khsudrahraha
Published on

ವಾಷಿಂಗ್ಟನ್: ಕ್ಷುದ್ರಗ್ರಹಗಳು ಕಾಣಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಇಂಥ ಗ್ರಹಗಳತ್ತ ಸದಾ ಬಾಹ್ಯಾಕಾಶ ಸಂಶೋಧಕರ ಕಣ್ಣು ನೆಟ್ಟೇ ಇರುತ್ತದೆ. ಇಂಥ ಗ್ರಹಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ.

ಅಂಥದ್ದೇ ಒಂದು ಅಧ್ಯಯನದಿಂದ ಇದೀಗ ಅತ್ಯಂತ ಕುತೂಹಲ ಹಾಗೂ ಭಯಾನಕ ಎನ್ನುವಂಥ ಅಂಶವು ಬೆಳಕಿಗೆ ಬಂದಿದೆ. ಅದೇನೆಂದರೆ, ಅಪೋಫಿಸ್ ಎಂಬ ಕ್ಷುದ್ರಗ್ರಹವೊಂದು ಭೂಮಿಗೆ ಭಯಾನಕ ರೀತಿಯಲ್ಲಿ ಅಪ್ಪಳಿಸಲಿದೆ ಎಂಬ ಅಂಶ. ಇದರಿಂದ ಭಾರಿ ಅನಾಹುತ ಸಂಭವಲಿದೆ ಎಂದು ಅವರು ಲೆಕ್ಕಾಚಾರ ಹಾಕಿದ್ದಾರೆ.

ಅಪೋಫಿಸ್ ಎಂಬ ಈ ಕ್ಷುದ್ರಗ್ರಹವನ್ನು 2004ರಲ್ಲಿಯೇ ಸಂಶೋಧಕರು ಕಂಡುಹಿಡಿದಿದ್ದಾರೆ. ಆ ಸಮಯದಲ್ಲಿ ಇದು ಭೂಮಿಗೆ ಅತಿ ಸಮೀಪದಲ್ಲಿ ಇತ್ತು. ಅದು ಕಕ್ಷೆಯನ್ನು ಸುತ್ತುವ ಅಂದಾಜು ಲೆಕ್ಕಾಚಾರದ ಆಧಾರದ ಮೇಲೆ 2029ರಲ್ಲಿ ಭೂಮಿಗೆ ಅಪ್ಪಳಿಸುವುದಾಗಿ ಹೇಳಲಾಗಿದೆ. ಆದರೆ ಇದರ ಪ್ರಮಾಣ ಕೇವಲ 2.7ರಷ್ಟು ಮಾತ್ರ ಇರುವ ಹಿನ್ನೆಲೆಯಲ್ಲಿ, ಅಂಥದ್ದೇನೂ ಭಾರಿ ಅನಾಹುತ ಸಂಭವಿಸಲಾರದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಕ್ಷುದ್ರಗ್ರಹದ ಗಾತ್ರದ ಬಗ್ಗೆ ವಿವರಿಸಿರುವ ಅವರು, ಇದು ಮೂರು ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿದೆ ಎಂದಿದ್ದಾರೆ. ಮಾತ್ರವಲ್ಲದೇ, 2029ರ ಏಪ್ರಿಲ್ 13 ರಂದು ಭೂಮಿಯ ಮೇಲ್ಮೈಯಿಂದ 31,900 ಕಿಲೋಮೀಟರ್ ದೂರದಲ್ಲಿ ಹಾದುಹೋಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಆದರೆ ಅಮೆರಿಕದ ಮನೋವಾದಲ್ಲಿರುವ ಹವಾಯಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು ಇದೇ ಕ್ಷುದ್ರಗ್ರಹದ ಮೇಲೆ ಇನ್ನಷ್ಟು ಅಧ್ಯಯನ ನಡೆಸಿದಾಗ ಕಂಡುಬಂದಿರುವ ಅಂಶವೆಂದರೆ, 2068ರ ವೇಳೆ ಇದು ಭೂಮಿಯನ್ನು ಅಪ್ಪಳಿಸುವ ಮೂಲಕ ಇಡೀ ಪ್ರಪಂಚಕ್ಕೆ ಭಾರಿ ಅನಾಹುತ ಮಾಡುವ ಸಂಭವವಿದೆ ಎನ್ನುವುದಾಗಿ ಹೇಳಿದ್ದಾರೆ.

ಈ ಕ್ಷುದ್ರಗ್ರಹವು ಕಕ್ಷೆಯಿಂದ ಪ್ರತಿವರ್ಷ ಸುಮಾರು 557 ಅಡಿಗಳಷ್ಟು ಸರಿಯುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ 2068ರಲ್ಲಿ ಇದು ಭಾರಿ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net