ಠಾಕ್ರೆ v/s ಶಿಂಧೆ- ಮತ್ತಷ್ಟು 'ಮಹಾ' ಕಗ್ಗಂಟು: ಶಾಸಕರಾಯ್ತು, ಈಗ ಸಂಸದರೂ ಬಂಡಾಯ

uddhav
Published on

ಮುಂಬೈ: ಶಿವಸೇನಾದ ನಾಯಕ ಏಕನಾಥ ಶಿಂಧೆ ಅವರಿಂದಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲ ಈಗ ಮತ್ತೊಂದು ಅಚ್ಚರಿಯ ಹಂತ ತಲುಪಿದೆ. ಇದಾಗಲೇ ಠಾಕ್ರೆ ಅವರಿಂದ ಬೇರ್ಪಟ್ಟು ಹಲವು ಶಾಸಕರು ಶಿಂಧೆ ಬಣಕ್ಕೆ ಸೇರಿದ್ದಾರೆ. ಇವರ ಸಂಖ್ಯೆ ಏರುತ್ತಲೇ ಇದೆ.

ಇದೀಗ, ಮತ್ತೊಂದು ಕುತೂಹಲದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಮತ್ತಷ್ಟು ಸಿಡಿಲು ಬಡಿದಂತಾಗಿದೆ. ಇದಕ್ಕೆ ಕಾರಣ, ಶಾಸಕರ ಬಂಡಾಯದ ಬೆನ್ನಲ್ಲೇ ಈಗ ಶಿವಸೇನೆಯ ಸಂಸದರು ಬಂಡಾಯ ಏಳುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ.

ಸದ್ಯ ಥಾಣೆ ಲೋಕಸಭಾ ಸಂಸದ ರಾಜನ್ ವಿಚಾರೆ, ವಾಷಿಮ್ ಕ್ಷೇತ್ರದ ಭಾವನಾ ಗಾವ್ಲಿ, ರಾಮ್‌ಟೆಕ್​ನ ಕೃಪಾಲ್ ತುಮಾನೆ ಹಾಗೂ ಕಲ್ಯಾಣ್​ನ ಸಂಸದ ಶ್ರೀಕಾಂತ್ ಶಿಂಧೆ ಬಂಡಾಯ ಏಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಷ್ಟೇ ಅಲ್ಲದೇ ಇದಾಗಲೇ 17 ಮಂದಿ ಸಂಸದರು ಏಕನಾಥ್​ ಶಿಂಧೆ ಜತೆ ಸಂಪರ್ಕದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ.

ಬಂಡಾಯಕ್ಕೆ ಕಾರಣವೇನು?: ಹಿಂದುತ್ವ ಸಿದ್ಧಾಂತ ಪಾಲನೆಯಲ್ಲಿ ಶಿವಸೇನೆ ಕಾರ್ಯಕರ್ತರು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ಆದರೆ, ಮಹಾಮೈತ್ರಿ ಸರ್ಕಾರ ರಚನೆ ಬಳಿಕ ಹಿಂದು ಮತಗಳು ತಮ್ಮ ಕೈಜಾರುವ ಆತಂಕ ಶಿವಸೇನೆ ಶಾಸಕರನ್ನು ಕಾಡಿದೆ. ಅಲ್ಲದೆ, ಮಹಾಮೈತ್ರಿ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಗೃಹ ಸಚಿವ ಜೈಲು ಸೇರಿರುವುದು ಸರ್ಕಾರದ ಇಮೇಜ್​ಗೆ ಭಾರಿ ಹಾನಿ ಮಾಡಿದೆ. ಎನ್​ಡಿಎ ಜತೆ ಕೈಜೋಡಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಭಾವನೆಯಿಂದಲೇ ಶಾಸಕರು ಬಂಡೆದ್ದು, ಸರ್ಕಾರದಿಂದ ಹೊರಬರುವ ತೀರ್ಮಾನ ಮಾಡಿದಂತಿದೆ. ಬಿಜೆಪಿ ಜತೆ ಸೇರಿ ಹಿಂದುತ್ವದ ಹೆಸರಲ್ಲೇ ಚುನಾವಣೆಗೆ ಸಿದ್ಧಗೊಳ್ಳುವ ತಂತ್ರವೂ ಇದರ ಹಿಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net