ನಿತೀಶ್​ಕುಮಾರ್​ಗೆ ಬಿಗ್​ ಶಾಕ್​: ಭ್ರಷ್ಟರಿಗೆ ಸಾಥ್​ ನೀಡಿದ್ದು ಸಹಿಸಲ್ಲ ಎಂದು ಕಮಲದ ಕೈಹಿಡಿದ 15 ಮಂದಿ!

JDU
Published on

ನವದೆಹಲಿ: ಕೆಲ ದಿನಗಳ ಹಿಂದೆ ಮಣಿಪುರದಲ್ಲಿ ಜೆಡಿಯು ಪಕ್ಷದ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದ ಬೆನ್ನಲ್ಲೇ ಇದೀಗ ಬಿಹಾರದ ಮುಖ್ಯಮಂತ್ರಿ ನಿತೀಶ್​ಕುಮಾರ್​ಗೆ ಪುನಃ ಶಾಕ್​ ಎದುರಾಗಿದೆ.

ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಹಾಗೂ ಆರ್​ಜೆಡಿ ಜತೆ ಕೈಜೋಡಿಸಿರುವ ನಿತೀಶ್​​ ಕುಮಾರ್​ ಜತೆ ನಾವಿರಲ್ಲ ಎಂದು ದಿಯು ಮತ್ತು ದಮನ್​ನ 15 ಮಂದಿ ಜೆಡಿಯುನ ಪಂಚಾಯ್ತಿ ಸದಸ್ಯರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನಿತೀಶ್ ಕುಮಾರ್​​ ಅವರು ಬಿಜೆಪಿ ತೊರೆದಿರುವ ನಿರ್ಧಾರದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಬಿಹಾರದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬಿಜೆಪಿ ತೊರೆದು ಭ್ರಷ್ಟರಾಗಿರುವ ಕಾಂಗ್ರೆಸ್ ಹಾಗೂ ಆರ್​ಜೆಡಿ ಜತೆ ನಿತೀಶ್ ಕುಮಾರ್​ ಕೈಜೋಡಿಸಿರುವುದರಿಂದ ನಮಗೆ ತುಂಬಾ ಬೇಸರವಾಗಿರುವ ಹಿನ್ನೆಲೆಯಲ್ಲಿ ನಾವು ಅವರ ಸಂಪರ್ಕ ಕಡಿದುಕೊಳ್ಳುತ್ತಿದ್ದೇವೆ ಎಂದು ಈ ಎಲ್ಲಾ ಪಂಚಾಯ್ತಿ ಸದಸ್ಯರು ಹೇಳಿದ್ದಾರೆ.

ಈ ಕುರಿತು ಬಿಜೆಪಿಯ ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ನೀಡಲಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ, ಜತೆಗೆ ಶೀಘ್ರದಲ್ಲಿಯೇ ಗುಜರಾತ್​, ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳೂ ನಡೆಯಲಿವೆ. ಇದರ ಬೆನ್ನಲ್ಲೇ ಹಲವು ಪಕ್ಷಗಳ ಧುರೀಣರು ಪಕ್ಷಾಂತರ ಕಾರ್ಯದಲ್ಲಿ ತೊಡಗಿದ್ದಾರೆ, ಹಲವರು ಇದಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net