ಪಂಜಾಬ್‌ನ ನೂತನ ಸಿಎಂ ಮಾನ್‌ ಸೇರಿದಂತೆ 11 ಮಂದಿ ವಿರುದ್ಧ ಕ್ರಿಮಿನಲ್‌ ಕೇಸ್‌! ಸ್ವಯಂ ಘೋಷಣೆ...

Mann
Published on

ಚಂಡೀಗಢ: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಆಪ್‌) ಭರ್ಜರಿ ಗೆಲುವು ಸಾಧಿಸಿದೆ. ನೂತನ ಸಚಿವ ಸಂಪುಟ ರಚನೆಯಾಗಿರುವ ಬೆನ್ನಲ್ಲೇ ಇದೀಗ ಇಡೀ ಸಂಪುಟ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರ ಪೈಕಿ 11 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು 9 ಮಂದಿ ಕೋಟ್ಯಧೀಶ್ವರರಾಗಿದ್ದಾರೆ. ನಾಲ್ವರ ವಿರುದ್ಧ ಗಂಭೀರ ಆರೋಪಗಳಿವೆ. ಕ್ರಿಮಿನಲ್‌ ಕೇಸ್‌ ಎದುರಿಸುತ್ತಿರುವವರ ಪೈಕಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸೇರಿದ್ದಾರೆ.

ಎಡಿಆರ್ ಪ್ರಕಾರ 7 ಸಚಿವರು (ಶೇ.64 ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಖುದ್ದು ಘೋಷಿಸಿಕೊಂಡಿದ್ದಾರೆ. 11 ಮಂದಿಯ ಪೈಕಿ ನಾಲ್ವರು (ಶೇ.36 ರಷ್ಟು ಮಂದಿ) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 11 ಸಚಿವರ ಪೈಕಿ ಕೋಟ್ಯಧಿಪತಿಯಾಗಿರುವ 9 ಮಂದಿಯ ಸರಾಸರಿ ಆಸ್ತಿ 2.87 ಕೋಟಿ ರೂಪಾಯಿಗಳಾಗಿವೆ.

ಈ ಕುರಿತು ಚುನಾವಣಾ ಹಕ್ಕುಗಳ ಗುಂಪು (ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್-ಎಡಿಆರ್‌) ಮಾಹಿತಿ ನೀಡಿದೆ. 8.56 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಬ್ರಾಮ್ ಶಂಕರ್ ಅತಿ ಹೆಚ್ಚು ಘೋಷಿತ ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ. ಭೋವಾ (ಎಸ್‌ಸಿ) ಕ್ಷೇತ್ರದಿಂದ ಗೆದ್ದಿರುವ ಲಾಲ್ ಚಂದ್ ಅವರು 6.19 ಲಕ್ಷ ಮೌಲ್ಯದ ಘೋಷಿತ ಆಸ್ತಿಯನ್ನು ಹೊಂದಿದ್ದಾರೆ.

ಶೇ 45ರಷ್ಟು ಸಚಿವರ ಅಂದರೆ ಐವರು ಸಚಿವರ ವಿದ್ಯಾರ್ಹತೆ 10-12 ನೇ ತರಗತಿಯಾಗಿದ್ದು, ಉಳಿದವರು ಪದವಿ ಅಥವಾ ಅದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ. ಸಂಪುಟದಲ್ಲಿರುವ ಶೇ.55 ರಷ್ಟು ಮಂದಿ 31-50 ವರ್ಷದವರಾಗಿದ್ದು, ಶೇ.45 ರಷ್ಟು ಮಂದಿ 51-60 ವರ್ಷಗಳವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net