More

    ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

    ಚಂಡೀಗಢ: ಕಾಂಗ್ರೆಸ್​ ನಡುವಿನ ತಿಕ್ಕಾಟ, ಮಾಜಿ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಅವರ ಪಕ್ಷ ತೊರೆಯುವಿಕೆ… ಹೀಗೆ ಪಂಜಾಬ್​ನ ಕಾಂಗ್ರೆಸ್​ನಲ್ಲಿ ಆಗಿದ್ದ ಅಲ್ಲೋಲ ಕಲ್ಲೋಲ, ಆಮ್​ ಆದ್ಮಿ ಪಕ್ಷಕ್ಕೆ (ಆಪ್​) ವರದಾನವಾಗಿದ್ದು, ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

    ಈ ಹಿನ್ನೆಲೆಯಲ್ಲಿ ಪಂಜಾಬ್​ ಮುಖ್ಯಮಂತ್ರಿಯಾಗಿ ಆಪ್​ನ ಭಗವಂತ್ ಮಾನ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಫೆ.20ರಂದು ತಮ್ಮ ತಾಯಿಯೊಂದಿಗೆ ಮತ ಚಲಾಯಿಸಲು ಹೋಗಿದ್ದ ಮಾನ್​ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದ್ದರು. ಆಗ ಮಾನ್​ ಅವರ ತಾಯಿ ಹರ್ಪಾಲ್​ ಕೌರ್ ‘ನನ್ನ ಮಗ ಈಗಾಗಲೇ ಮುಖ್ಯಮಂತ್ರಿಯಾಗಿದ್ದಾನೆ. ಅವನನ್ನು ಎಲ್ಲರೂ ಪ್ರೀತಿಸುವುದನ್ನು ನೋಡಲು ಖುಷಿಯಾಗುತ್ತದೆ. ಖಂಡಿತ ಅವನು ಸಿಎಂ ಆಗಲಿದ್ದಾನೆ’ ಎಂದು ಭವಿಷ್ಯ ನುಡಿದಿದ್ದರು. ಇದೀಗ ನಿಜವಾಗಿದೆ.

    ಕಾಮಿಡಿಯನ್​ನಿಂದ ಸಿಎಂವರೆಗೆ…
    ಸುಂಗ್ರೂರ್​​ನ ಸಾತೋಜ್​ ಗ್ರಾಮದಲ್ಲಿ ಹುಟ್ಟಿರುವ ಭಗವಂತ್​ ಮಾನ್ ಅವರಿಗೆ ಈಗ 48 ವರ್ಷ ವಯಸ್ಸು. ಇವರು ಎರಡು ಅವಧಿಗೆ ಸಂಗ್ರೂರ್​ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರು. ಕಾಲೇಜಿನಲ್ಲಿ ಇರುವಾಗಲೇ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಅತ್ಯಂತ ಚೆನ್ನಾಗಿ ವಿಡಂಬನೆ ಮಾಡುತ್ತಿದ್ದ ಅವರು ಬಹುಬೇಗನೇ ಒಬ್ಬ ಕಾಮಿಡಿಯನ್ ಆಗಿ ಗುರುತಿಸಿಕೊಂಡರು. ಪಂಜಾಬ್​ ದೂರದರ್ಶನ ಚಾನಲ್​ನಲ್ಲಿ ಪ್ರಸಾರವಾಗುತ್ತಿದ್ದ ಜುಗ್ನು ಮಸ್ತ್ ಮಸ್ತ್​ನಂತಹ ದೀರ್ಘಾವಧಿ ಶೋಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

    ಸ್ಟ್ಯಾಂಡ್​ಅಪ್​ ಕಾಮಿಡಿಯನ್​ ಆಗಿದ್ದಾಗಲೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಮಾನ್​ ಅವರು 2014ರಲ್ಲಿ ಪೀಪಲ್ಸ್ ಪಾರ್ಟಿ ಆಫ್​ ಪಂಜಾಬ್​ನ್ನು ಸೇರಿದ್ದರು. ಕಳೆದು ಹೋಗಿರುವ ನೈಜ ಪಂಜಾಬ್​​ನ್ನು ಮತ್ತೆ ವಾಪಸ್​ ಪಡೆಯಲು ನಮ್ಮ ಆಪ್​ ಪಕ್ಷ ಇಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹೇಳುತ್ತಲೇ ಈ ಬಾರಿ ಅವರು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ, ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಭರ್ಜರಿ ಮುನ್ನಡೆ ಗಳಿಸಿರುವ ಮಾನ್​ ಈಗ ಮುಖ್ಯಮಂತ್ರಿಯಾಗಲಿದ್ದಾರೆ.

    2022ರ ಜನವರಿ 19ರಂದು ಆಮ್​ ಆದ್ಮಿ ಪಕ್ಷ ಪಂಜಾಬ್​​ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಭಗವಂತ್ ಮಾನ್​ ಹೆಸರನ್ನು ಘೋಷಿಸಿತು. ಹೀಗೆ ಘೋಷಣೆಗೂ ಮೊದಲು ಆಪ್​ ಒಂದು ಹೊಸ ಪ್ರಯೋಗ ಮಾಡಿತ್ತು. ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಜನರಿಗೇ ಹೇಳಿ, ಆಯ್ಕೆಯಾಗಿ ಫೋನ್​ನಂಬರ್​ ಕೊಟ್ಟಿತ್ತು. ಈ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಚುನಾವಣೆಗೆ ಸುಮಾರು 2.15 ದಶಲಕ್ಷ ಜನರು ಸ್ಪಂದಿಸಿದ್ದರು. ಶೇ.93ರಷ್ಟು ಜನರು ಮಾನ್​ ಪರ ಮತದಾನ ಮಾಡಿದ್ದರು.

    ಸಂಸತ್​ ಕಲಾಪಕ್ಕೆ ಮದ್ಯಪಾನ ಮಾಡಿಕೊಂಡು ಬಂದಿದ್ದ ಮಾನ್​, ತೀವ್ರ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡು, ಎರಡು ವರ್ಷಗಳ ಹಿಂದೆ ಬರ್ನಾಲಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯ ವೇಳೆ, ತಾನು ಇನ್ನು ಮುಂದೆ ಎಂದಿಗೂ ಮದ್ಯಪಾನ ಮಾಡುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದರು. ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಚನ್ನಿ, ಭಗವಂತ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಂಜಾಬ್‌ನ ಭಟಿಂಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಭಗವಂತ್​ ಮನ್​ ಒಬ್ಬ ಕುಡುಕ ಮತ್ತು ಅನಕ್ಷರಸ್ಥ ವ್ಯಕ್ತಿ. ಆಪ್ ಇಂಥ ವ್ಯಕ್ತಿಯ ಕೈಯಲ್ಲಿ ಪಂಜಾಬ‌ ಕೊಡಲು ಹೊರಟಿದೆ. 12 ತರಗತಿ ಪಾಸು ಮಾಡಲು ಮೂರು ವರ್ಷ ತೆಗೆದುಕೊಂಡದ್ದೂ ಅಲ್ಲದೇ ಅವರು ಕುಡುಕರು. ಇಂಥವರ ಕೈಗೆ ನಮ್ಮ ರಾಜ್ಯ ಕೊಡುವುದು ಹೇಗೆ ಎಂದು ಜನತೆಯನ್ನು ಪ್ರಶ್ನಿಸಿದ್ದರು. ಆದರೆ ಕಾಂಗ್ರೆಸ್​ ಹೀನಾಯ ಸೋಲು ಕಂಡಿದ್ದು, ಮಾನ್​ ಭರ್ಜರಿ ಗೆಲುವು ಕಂಡಿದ್ದಾರೆ.

    ‘12ನೇ ತರಗತಿ ಮೂರು ಸಲ ಬರೆದ ಕುಡುಕ, ಅನಕ್ಷರಸ್ಥನ ಕೈಯಲ್ಲಿ ನಮ್ಮ ರಾಜ್ಯ ಕೊಡೋದು ಹೇಗೆ’ ಎಂದ ಚನ್ನಿ!

    ಜನ ಬದಲಾವಣೆ ಬಯಸ್ತಿದ್ದಾರೆ, ನನ್ನ ಮಗ ಇದಾಗಲೇ ಸಿಎಂ ಆಗಿಬಿಟ್ಟ ಎಂದ ಭಗವಂತ್ ಮಾನ್ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts