blank

ಬಿಗಡಾಯಿಸುತ್ತಿದೆ ತ್ಯಾಜ್ಯ ಸಮಸ್ಯೆ : ರಸ್ತೆ ಬದಿ ಕಸದ ರಾಶಿ

waste

ಹೇಮನಾಥ್ ಪಡುಬಿದ್ರಿ

ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಪಂಗಳಲ್ಲೊಂದಾದ ಪಡುಬಿದ್ರಿ ಗ್ರಾಪಂನಲ್ಲಿ ಘನತ್ಯಾಜ್ಯ ವಿಲೇ ಘಟಕ ಆರಂಭಿಸಿ ಹಲವು ವರ್ಷಗಳೇ ಕಳೆದರೂ, ಗ್ರಾಮದಲ್ಲಿ ತ್ಯಾಜ್ಯ ಸಮಸ್ಯೆ ದಿನೇ ದಿನೆ ಬಿಗಡಾಯಿಸುತ್ತಿದ್ದು, ರಸ್ತೆಗಳಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 17 ಸಾವಿರ ಜನಸಂಖ್ಯೆಯಿರುವ ಪಡುಬಿದ್ರಿ ಗ್ರಾಪಂನಲ್ಲಿ ಎಲ್ಲ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕನಿಷ್ಠ ಒಂದೆಕರೆ ಜಾಗದ ಅವಶ್ಯಕತೆಯಿದೆ. ಆದರೆ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿಂದ ಕೆಲವರ್ಷಗಳ ಹಿಂದೆ ಗ್ರಾಪಂ ಮುಂಭಾಗದಲ್ಲಿಯೇ ಪ್ರಾಯೋಗಿಕವಾಗಿ ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಆರಂಭಿಸಿ ಕೆಲವೇ ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹಿಸಲು ಕ್ರಮ ವಹಿಸಲಾಗಿತ್ತು. ಆದರೆ ಗ್ರಾಪಂ ಮನೆಗಳಿಂದ ಕೇವಲ ಒಣ ಕಸ ಸಂಗ್ರಹಿಸದೆ ಹಸಿಕಸವನ್ನೂ ಒಟ್ಟಿಗೆ ಸಂಗ್ರಹಿಸಿದ ಪರಿಣಾಮ ಘಟಕದ ಪ್ರದೇಶ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿತ್ತು. ಸಾರ್ವಜನಿಕವಾಗಿ ಇದರಿಂದ ತೊಂದರೆಯಾದಾಗ ಇತರ ಗ್ರಾಪಂ, ಪುರಸಭೆಯನ್ನು ಕಾಡಿ ಬೇಡಿ ಸ್ಥಳಾಂತರಿಸಿ ಪರಿಸ್ಥಿತಿ ಸುಧಾರಿಸಲಾಗಿತ್ತು.

ಜಾಗೃತಿಗೆ ನಿರ್ಲಕ್ಷ್ಯ

ಆಯಕಟ್ಟಿನ ಸ್ಥಳಗಳಲ್ಲಿ ಜಾಗೃತಿಗಾಗಿ ‘ನಾಗಬನ, ದೈವಸ್ಥಾನ ಪರಿಸರ ತ್ಯಾಜ್ಯ ಎಸೆಯದಿರಿ’ ಎಂದು ಫಲಕ ಅಳವಡಿಸಿದರೂ ಜನ ಕ್ಯಾರೇ ಎನ್ನುತ್ತಿಲ್ಲ. ಕೆಲವೆಡೆ ಸಿಸಿ ಕ್ಯಾಮರಾ ಕಣ್ಗಾವಲು ನಿರ್ಮಿಸಿ ದಂಡದ ಎಚ್ಚರಿಕೆ ನೀಡಿದರೂ, ಆ ಸ್ಥಳ ಬಿಟ್ಟು ಮತ್ತೊಂದೆಡೆ ಕಸ ಸುರಿಯಲಾಗುತ್ತಿದೆ. ಪ್ರಮುಖ ರಸ್ತೆಗಳಾದ ಪಡುಬಿದ್ರಿ, ಕಾರ್ಕಳ ರಾಜ್ಯ ಹೆದ್ದಾರಿ, ಅಲಂಗಾರು, ಅಬ್ಬೇಡಿ ರಸ್ತೆ, ಕಂಚಿನಡ್ಕ ಪೊಲೀಸ್ ವಸತಿಗೃಹ, ಮಸೀದಿ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ತ್ಯಾಜ್ಯ ಕೊಂಪೆಗಳಾಗಿ ಮೂಗು ಮುಚ್ಚಿ ನಡೆಯಬೇಕಾದ ಸ್ಥಿತಿ ಎದುರಾಗಿದೆ. ಮಳೆ ನೀರು ಹರಿಯುವ ಚರಂಡಿಗಳಂತೂ ತ್ಯಾಜ್ಯದಿಂದ ಮುಚ್ಚಿಹೋಗಿವೆ. ಗ್ರಾಮದಲ್ಲಿ ಹರಿಯುವ ಕಾಮಿನಿ ನದಿ ತೋಡು ಸೇರಿದಂತೆ ಇತರ ಮಳೆ ನೀರು ಹರಿಯುವ ತೋಡುಗಳಲ್ಲಿ ತ್ಯಾಜ್ಯ ಮೂಟೆಗಳನ್ನು ಸುರಿಯಲಾಗುತ್ತಿದೆ. ಇದು ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣವಾಗಲಿದೆ. ಘನತ್ಯಾಜ್ಯಕ್ಕೆ ಬೆಂಕಿ ಹಚ್ಚದಂತೆ ನ್ಯಾಯಾಲಯ ಆದೇಶವಿದ್ದರೂ, ಕೆಲರಸ್ತೆಗಳಲ್ಲಿ ಸುರಿದ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ಹಸಿ ತ್ಯಾಜ್ಯ ನಿರ್ವಹಣೆ

ಬೆಳೆಯುತ್ತಿರುವ ಪಟ್ಟಣವಾಗಿರುವ ಪಡುಬಿದ್ರಿಯಲ್ಲಿ ಕೈಗಾರಿಕಾ ಘಟಕ, ವಸತಿ ಸಂಕೀರ್ಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತ್ಯಾಜ್ಯ ವಿಲೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸೂಕ್ತ ಸರ್ಕಾರಿ ಜಮೀನಿಗಾಗಿ ಹುಡುಕಾಟ ನಡೆಸಿದರೂ ಲಭ್ಯವಾಗದೆ ಪ್ರಸ್ತುತ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಖಾಸಗಿ ಜಮೀನು ಗೊತ್ತುಪಡಿಸಿ ಅಲ್ಲಿ ಗೊಬ್ಬರ ತಯಾರಿ ಆರಂಭಿಸಲಾಗಿದೆ.

ಕೆರೆತಕಾಡು ನದಗಕ್ಕೆ ತಡೆಬೇಲಿ

ಸುಜ್ಲಾನ್ ಪುನರ್ವಸತಿ ಕೇಂದ್ರ ಬಳಿ ನೂರಾರು ವರ್ಷಗಳಿಂದ ಅದೆಷ್ಟೋ ಕೃಷಿಕರಿಗೆ ಅನುಕೂಲಕರವಾಗಿದ್ದ ಕೆರೆತಕಾಡು ಮದಗಕ್ಕೆ ತ್ಯಾಜ್ಯ ಸುರಿದು ತಿಪ್ಪೆಗುಂಡಿಯಾಗಿತ್ತು. ದೂರಿನ ಬಳಿಕ ಎಚ್ಚೆತ್ತ ಗ್ರಾಪಂ ತಡೆ ಬೇಲಿ ನಿರ್ಮಿಸಿ ಸಿಸಿ ಕ್ಯಾಮರಾ ಕಣ್ಗಾವಲಿರಿಸಿ ಹತೋಟಿಗೆ ಕ್ರಮ ವಹಿಸಿದೆ. ಆದರೆ ಇದೀಗ ಈ ರಸ್ತೆಯ ಅನತಿ ದೂರದಲ್ಲಿ ಮತ್ತೆ ಕಸ ಸುರಿಯಲಾಗುತ್ತಿದೆ.

ಜಮೀನಿಗಾಗಿ ಹುಡುಕಾಟ

ಘನತ್ಯಾಜ್ಯ ವಿಲೇಗಾಗಿ ಇದ್ದ ಜಮೀನು ಸುಜ್ಲಾನ್ ಯೋಜನೆಗೆ ಸ್ವಾಧೀನಗೊಂಡ ಬಳಿಕ ಗ್ರಾಪಂ ಜಮೀನಿಲ್ಲದೆ ಪರದಾಡುವಂತಾಗಿದೆ. ಅಂದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದೀಗ ಸುಜ್ಲಾನ್ ಯೋಜನೆ ನಿರೀಕ್ಷಿಸಿದಷ್ಟು ಯಶಸ್ಸಾಗದೆ ಇದ್ದ ಜಮೀನುಗಳನ್ನು ಮಾರಾಟ ಮಾಡುತ್ತಿದೆ. 3 ಎಕರೆ ಜಮೀನಿಗಾಗಿ ಜಿಲ್ಲಾಧಿಕಾರಿ, ಶಾಸಕರ ಮೂಲಕ ಗ್ರಾಪಂ ಪ್ರಯತ್ನ ನಡೆಸಿದ್ದರೂ ಧನಾತ್ಮಕ ಸ್ಪಂದನೆ ಇನ್ನೂ ದೊರೆತಿಲ್ಲ.

ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಹಸಿ ತ್ಯಾಜ್ಯ ಸಂಗ್ರಹಣೆಯಿಂದಾಗುತ್ತಿದ್ದ ಸಮಸ್ಯೆ ಪರಿಹರಿಸುವ ಸಲುವಾಗಿ ಖಾಸಗಿ ಜಮೀನಿನಲ್ಲಿ ಹಸಿ ಕಸದಿಂದ ಗೊಬ್ಬರ ತಯಾರಿಕೆ ಆರಂಭಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ರಸ್ತೆಗಳ ಇಕ್ಕೆಲಗಳಲ್ಲಿ ಸುರಿದ ತ್ಯಾಜ್ಯ ತೆರವಿಗಾಗಿ ಪ್ರತಿ ಶನಿವಾರ ಸ್ವಚ್ಛತಾ ಕಾರ್ಯ ನಡೆಸುವ ಬಗ್ಗೆ ಚಿಂತಿಸಲಾಗಿದೆ.
– ಶಶಿಕಲಾ ವೈ, ಅಧ್ಯಕ್ಷೆ, ಪಡುಬಿದ್ರಿ ಗ್ರಾಪಂ

ಪಡುಬಿದ್ರಿ ಗ್ರಾಮದ ತ್ಯಾಜ್ಯ ಸಮಸ್ಯೆ ಹತೋಟಿಗೆ ತರಲು ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು. ಶೀಘ್ರದಲ್ಲಿಯೇ ಪ್ರತಿ ವಾರ್ಡ್‌ಗಳಿಂದಲೂ ಕಸ ಸಂಗ್ರಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ತ್ಯಾಜ್ಯಕ್ಕೆ ಬೆಂಕಿ ಹಚ್ಚಲು ಅವಕಾಶವಿಲ್ಲ. ತ್ಯಾಜ್ಯ ನಿರ್ವಹಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ತಿಂಗಳೊಳಗೆ ಕಾರ್ಯಾಗಾರ ನಡೆಸಲಾಗುವುದು. ಮಳೆ ನೀರು ಹರಿಯುವ ಚರಂಡಿಗಳ ತ್ಯಾಜ್ಯ ತೆರವಿನ ಬಗ್ಗೆ ಗಮನಹರಿಸಲಾಗುವುದು.
– ಮಂಜುನಾಥ ಶೆಟ್ಟಿ, ಪಿಡಿಒ, ಪಡುಬಿದ್ರಿ

Share This Article

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…