ರೈತರು, ಕಾರ್ಮಿಕರು, ನಿರುದ್ಯೋಗಿಗಳ ಸಮಸ್ಯೆ ಬಗೆಹರಿಸುವಲ್ಲಿ ಮೋದಿ ವಿಪಲ: ಮೊಯಿಲಿ ವಾಗ್ದಾಳಿ

9CBP3(moyily)
Published on

ಬೆಂಗಳೂರು:
ದೇಶದಲ್ಲಿ ರೈತರು, ಕಾರ್ಮಿಕರು, ಕೈಗಾರಿಕೆಗಳಿಂದ ಹಿಡಿದು ನಿರುದ್ಯೋಗ ತನಕ ಎಲ್ಲಾ ಸಮಸ್ಯೆ ಬಗೆಹರಿಸುವಲ್ಲಿ ಮೋದಿ ಸರ್ಕಾರ ವಿಪಲವಾಗಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ತೊಲಗಿಸುವುದೊಂದೇ ಸಮಸ್ಯೆಗೆ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ಕೈಗಾರಿಕೆಗಳು ಇಡೀ ದೇಶದಾದ್ಯಂತ ದಿವಾಳಿಯಾಗಿವೆ. ಅನೇಕ ಜಾಗಗಳು ರಿಯಲ್ ಎಸ್ಟೇಟ್ ಜಾಗಗಳಾಗಿ ಬದಲಾಗಿವೆ ಎಂದು ವಾಗ್ದಾಳಿ ನಡೆಸಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು, ಮಾಡಲಿಲ್ಲ. ಜಿಎಸ್‌ಟಿ ಯಿಂದ ಸಣ್ಣ, ಸಣ್ಣ ವ್ಯಾಪಾರಿಗಳು ಸತ್ತು ಹೋಗಿದ್ದಾರೆ. ಎಂಎಸ್‌ಪಿ ಬಗ್ಗೆ ಬಿಜೆಪಿ ಚಕಾರವೇ ಎತ್ತುತ್ತಿಲ್ಲ ಎಂದರು.
ಮೋದಿ ಅಧಿಕಾರಕ್ಕೆ ಬಂದ ಮೇಲೆ 2014 ರ ಈಚೆಗೆ ಸುಮಾರು ಶೇ.34 ರಷ್ಟು ಅಪರಾದ ಮಹಿಳೆಯರ ಮೇಲೆ ಹೆಚ್ಚಾಗಿದೆ. ಭೇಟಿ ಬಚಾವೋ ಭೇಟಿ ಪಡಾವೊ ಎಂದು ಕೇವಲ ಘೋಷಣೆ ಮಾಡಿ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಯುವಕರಿಗೆ ಉದ್ಯೋಗವಿಲ್ಲ, ಸಾರ್ವಜನಿಕ ಕೈಗಾರಿಕೆಗಳು ಮುಚ್ಚುತ್ತಿರುವ ಕಾರಣ ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ. ಜಾತಿ ಗಣತಿ ಬಗ್ಗೆ ಮಾತೇ ಆಡುತ್ತಿಲ್ಲ. ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಗಣತಿಯನ್ನು ನಿಲ್ಲಿಸಿದ್ದು ಇದೇ ಮೋದಿ ಸರ್ಕಾರ ಎಂದರು.
ನಾನು ಸಿಎಂ ಆಗಿದ್ದಾಗ ಚಿನ್ನಪ್ಪ ರೆಡ್ಡಿ ಆಯೋಗ ಮಾಡಿ ಸಣ್ಣ, ಸಣ್ಣ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಮೊದಲ ಬಾರಿಗೆ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಿದ್ದೆ.
ಎಲ್ಲಾ ಓಬಿಸಿಗಳು ಎಂದರೆ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಇದನ್ನು ನಾನೇ ಮಾಡಿದ್ದು ಎಂದು ದೇವೇಗೌಡರು ಹೇಳಿಕೊಳ್ಳುತ್ತಿದ್ದರೂ, ನಮ್ಮವರು ಸುಮ್ಮನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ 20 ಕೋಟಿ ಮುಸ್ಲಿಮರು, 5 ಕೋಟಿ ಕ್ರೈಸ್ತರಿದ್ದು, ಅವರು ಬದುಕುವದಕ್ಕೆ ಭಯದ ವಾತಾವರಣ ಉಂಟಾಗಿದೆ. ಪ್ರಜಾಪ್ರಭುತ್ವವನ್ನೇ ತಲೆಕೆಳಗು ಮಾಡಿ ದೇಶವನ್ನೇ ಹಾಳು ಮಾಡಲಾಗುತ್ತಿದೆ. ಮುಸಲೋನಿ, ಹಿಟ್ಲರ್, ಸದ್ದಾಂ ಹುಸೇನ್ ಸಮಯದ ಆಡಳಿತ ವನ್ನು ನೆನಪಿಸುವಂತಿದೆ.
ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿದೆ. ದೇಶದ ಜಿಡಿಪಿ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಬಿಲಿಯನೇರ್‌ಗಳ ರಾಜ್ಯವಾಗಿ ರೂಪುಗೊಳ್ಳುತ್ತಿದೆ. ಮೋದಿ ಕಾಲದಲ್ಲಿ 94 ಬಿಲಿಯನೇರ್ ಗಳ ಸಂಖ್ಯೆ ಹೆಚ್ಚಾಗಿದೆ. ಇವರು ದೇಶದ ಶೇ 60 ರಷ್ಟು ಆದಾಯವನ್ನು ಕಬಳಿಸಿದ್ದಾರೆ. ದೇಶದ 50 ರಷ್ಟು ಜನರು ಕೇವಲ 3 ರಷ್ಟು ಆದಾಯ ಹೊಂದಿದ್ದಾರೆ. ಇವರೇ ದೇಶದ ಹೆಚ್ಚು ಜಿಎಸ್‌ಟಿಯನ್ನು ಕಟ್ಟುತ್ತಿದ್ದಾರೆ ಎಂದರು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶದ ಸ್ಥಾನ 111ಕ್ಕಿಳಿದಿದೆ. ಪಿಎಂ ಕೇರ್ಸ ಮೂಲಕ ಸುಮಾರು 25 ಸಾವಿರ ಕೋಟಿಯನ್ನು ವಸೂಲಿ ಮಾಡಿದ್ದಾರೆ. ಚುನಾವಣಾ ಬಾಂಡ್ ಮೂಲಕ 8 ಸಾವಿರ ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ದೋಚಿದ್ದಾರೆ. ಪ್ರತಿ ಪ್ರಜೆ ಮೇಲೆ ಇದ್ದ ಸಾಲವನ್ನು ಡಬಲ್ ಮಾಡಿದ್ದಾರೆ. ದೇಶದ ಸಾಲವೂ ಡಬಲ್ ಆಗಿದೆ ಎಂದು ದೂರಿದರು.
ಮತ್ತೆ ಮೋದಿ ಆಯ್ಕೆಯಾದರೆ, ಶ್ರೀಲಂಕಾದಂತೆ ಅರಾಜಕತೆ ಆಗುವುದರಲ್ಲಿ ಅನುಮಾನವೇ ಇಲ್ಲ. ದೇಶವನ್ನಷ್ಟೆ ಅಲ್ಲ, ಜನರನ್ನು ದಿವಾಳಿ ಮಾಡುತ್ತಾರೆ. ಎಫ್‌ಡಿಐಯಲ್ಲೂ ಕೂಡಾ ಸಂಪೂರ್ಣವಾಗಿ ಕುಸಿದಿದ್ದು ವಿದೇಶಗಳಲ್ಲಿ ಭಾರತದ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದರು.
ನಮ್ಮ ದೇಶಕ್ಕೆ ಇಂತಹ ಈವೆಂಟ್ ಮ್ಯಾನೇಜರ್‌ರಂತ ಪ್ರದಾನಿ ಬೇಡ. ಇದರಿಂದ ರೈತರು, ಕಾರ್ಮಿಕರ ಜೀವನ ಹಾಳಾಗಿ ಹೋಗಿದೆ, ಮುಂದಕ್ಕೆ ಹಾಳಾಗಿ ಹೋಗಲಿದೆ ಎಂದರು.
ಗ್ಯಾರಂಟಿಗಳು ಜಾರಿ ಆಗುತ್ತವೆಯೇ ಎನ್ನುವ ಅನುಮಾನವಿತ್ತು ಅದರೆ ಕೇವಲ 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿ ಇತಿಹಾಸ ಸೃಷ್ಟಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ, ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net