

ಮಾಸ್ಕೋ: ಕರೊನಾ ವೈರಸ್ ನಿಗ್ರಹಕ್ಕೆ ಜಗತ್ತಿನಲ್ಲೇ ಪ್ರಪಥಮವಾಗಿ ಲಸಿಕೆ ಸಂಶೋಧಿಸಿ ಅದರ ನೋಂದಣಿಯನ್ನು ಮಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ರಷ್ಯಾ ಈಗ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸ್ಪುಟ್ನಿಕ್-ವಿ ಎಂದು ಹೆಸರಿಸಲಾಗಿರುವ ಈ ಕರೊನಾ ಲಸಿಕೆಯನ್ನು ಅತ್ಯಂತ ಶೀಘ್ರ ಅಂದರೆ ವಾರದೊಳಗೇ ಸಾರ್ವತ್ರಿಕ ಬಳಕೆಗೆ ಮುಕ್ತಗೊಳಿಸುವುದಾಗಿ ಘೋಷಣೆ ಮಾಡಿದೆ.
ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಅಥವಾ ಸಾರ್ವಜನಿಕವಾಗಿ ಬಳಕೆ ಮಾಡಲಾಗುವುದು. ಇದಕ್ಕೆ ಆರೋಗ್ಯ ಇಲಾಖೆ ಅನುಮತಿ ನೀಡಿದೆ ಎಂದು ರಷ್ಯಾ ಹೇಳಿರುವುದಾಗಿ ಆರೋಗ್ಯ ತಜ್ಞ ಡೆನಿಸ್ ಲೋಗುನೋವ್ ಅವರನ್ನು ಉಲ್ಲೇಖಿಸಿ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾಗರಿಕರ ಬಳಕೆಗಾಗಿ ಮುಕ್ತಗೊಳಿಸುವ ಔಷಧದ ಬ್ಯಾಚ್ಗೆ ಪರವಾನಗಿ ನೀಡಲು ಕೆಲ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ನಂತರ ಅನುಮತಿ ಲಭಿಸಲಿದೆ ಎಂದು ಪ್ರಕಟಿಸಲಾಗಿದೆ.
ವೈದ್ಯಕೀಯ ನಿಯಂತ್ರಣಾ ಘಟಕದ ಪರೀಕ್ಷೆಯಲ್ಲಿ ಲಸಿಕೆ ಪಾಸಾಗಬೇಕು. ಇದಾದ ಬಳಿಕ ಸೆ.10- 13ರ ಒಳಗೆ ಅನುಮತಿ ಲಭಿಸಲಿದೆ. ತಕ್ಷಣವೇ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸ್ನ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡೆನಿಸ್ ಲೋಗುನೋವ್ ಹೇಳಿದ್ದಾರೆ.
ರಷ್ಯನ್ ಆರೋಗ್ಯ ಸಚಿವಾಲಯದ ಮೂಲಕ ಲಸಿಕೆ ವಿತರಣೆ ಮಾಡಲಾಗುತ್ತದೆ. ಮೊದಲಿಗೆ ಸೋಂಕು ಸಂಭಾವ್ಯತೆ ಹೆಚ್ಚಿರುವವರಿಗೆ ಲಸಿಕೆ ನೀಡಲಾಗುತ್ತದೆ. ಅದರಲ್ಲೂ ಕರೊನಾ ವಾರಿಯರ್ಸ್ಗಳಿಗೆ ಆದ್ಯತೆ ಇರಲಿದೆ ಎಂದು ಡೆನಿಸ್ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಷ್ಯನ್ ಲಸಿಕೆ ಮಾನವ ಬಳಕೆಗೆ ಸುರಕ್ಷಿತ ಹಾಗೂ ದೇಶಹದಲ್ಲಿ ರೋಗ ನಿರೋಧಕ ಶಕ್ತಿ ಉಂಟು ಮಾಡುತ್ತದೆ ಎಂದು ಲಾನ್ಸೆಟ್ ನಿಯತಕಾಲಿಕದಲ್ಲಿ ಸಂಶೋಧನಾ ಫಲಿತಾಂಶ ಪ್ರಕಟವಾಗಿತ್ತು. ರಷ್ಯಾ ಕೂಡ ಸಾವಿರಾರು ಜನರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಅದರ ಫಲಿತಾಂಶಕ್ಕೂ ಮುನ್ನ ಬೃಹತ್ ಪ್ರಮಾಣದಲ್ಲಿ ಲಸಿಕೆ ಬಳಸುತ್ತಿದೆ.