ರಷ್ಯಾ ಸರ್ಕಾರದಿಂದ ತಯಾರಾಯ್ತು ಮತ್ತೊಂದು ಕರೊನಾ ಲಸಿಕೆ; ಮಾನವ ಬಳಕೆಗೆ ಸುರಕ್ಷಿತ

oxford vaccine
Published on

ನವದೆಹಲಿ: ರಷ್ಯಾದ ಮೊದಲ ಕರೊನಾ ನಿಗ್ರಹ ಲಸಿಕೆ ಸ್ಪುಟ್ನಿಕ್​-ವಿ ಈಗಾಗಲೇ ನೋಂದಣಿಯಾಗಿ ರಷ್ಯನ್​ರ ಬಳಕೆಗೆ ಮುಕ್ತವಾಗಿದೆ. ಜತೆಗೆ, ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ವಿಶ್ವ ಮಾನ್ಯತೆಗೆ ಪರಿಗಣಿಸುವಂತಾಗಲು ಮೂರನೇ ಹಂತದಲ್ಲಿ 30 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗುತ್ತಿದೆ.

ಇನ್ನೊಂದೆಡೆ, ರಷ್ಯಾದ ಇನ್ನೊಂದು ಲಸಿಕೆ ಕೂಡ ಮಾನವ ಬಳಕೆಗೆ ಸುರಕ್ಷಿತ ಎಂದು ಸಾಬೀತಾಗಿದೆ. ಎರಡನೇ ಲಸಿಕೆ ಒಂದನೆಯದಕ್ಕಿಂತ ತುಂಬ ಭಿನ್ನವಾಗಿದೆ ಎಂದು ಹೇಳಲಾಗಿದೆ.

ಈ ಲಸಿಕೆಯನ್ನು ಎಪಿವ್ಯಾಕ್​ಕರೊನಾ (EpiVacCorona) ಎಂದು ಹೆಸರಿಸಲಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ರಷ್ಯಾದ ಮಾನವ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಎಪಿವ್ಯಾಕ್​ಕರೊನಾದ ಕ್ಲಿನಿಕಲ್​ ಟ್ರಯಲ್​ಗಳು ಸೆಪ್ಟೆಂಬರ್​ ವೇಳೆಗೆ ಪೂರ್ಣಗೊಳ್ಳಲಿವೆ. ಇದನ್ನು ಕೂಡ ಸರ್ಕಾರಿ ಸ್ವಾಮ್ಯದ ಸ್ಟೇಟ್​ ರಿಸರ್ಚ್​ ಸೆಂಟರ್​ ಆಫ್​ ವೈರಾಲಜಿ ಆ್ಯಂಡ್​ ಬಯೋಟೆಕ್ನಾಲಜಿ (ವೆಕ್ಟರ್​) ಸಂಸ್ಥೆ ಅಭಿವೃದ್ಧಿಪಡಿಸಿದೆ.

14 ಹಾಗೂ 21 ದಿನಗಳ ಅಂತರದ್ಲಲಿ ಎರಡು ಬಾರಿ ಲಸಿಕೆ ನೀಡಿದಾಗ ದೇಹದಲ್ಲಿ ಪ್ರತಿರೋಧ ಶಕ್ತಿ ಬೆಳವಣಿಗೆಯಾಗುತ್ತಿರುವುದು ಗೊತ್ತಾಗಿದೆ. ಆದರೆ, ಈವರೆಗೆ ಒಬ್ಬ ವ್ಯಕ್ತಿಗೆ ಮಾತ್ರ ಎರಡು ಬಾರಿ ಈ ಲಸಿಕೆ ನೀಡಲಾಗಿದೆಯಂತೆ.

ಲಸಿಕೆ ನೀಡಲಾದ ಎಲ್ಲ 57 ಜನರು ಆರೋಗ್ಯದಿಂದ ಇದ್ದಾರೆ. ಇದರಲ್ಲಿ 14 ಜನರಿಗಷ್ಟೇ ಲಸಿಕೆ ನೀಡಲಾಗಿದ್ದರೆ, ಇನ್ನುಳಿದವರಿಗೆ ಡಮ್ಮಿ ಚುಚ್ಚುಮದ್ದು ನೀಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net