ಭಾರತದಲ್ಲಿ ಸ್ಪುಟ್ನಿಕ್ ಪ್ರಯೋಗ; ಕರೊನಾ ಔಷಧ ಕುರಿತ ಮಹತ್ವದ ಮಾಹಿತಿ ನೀಡಿದ ರಷ್ಯಾ

Russian vaccine
Published on

ನವದೆಹಲಿ: ಕರೊನಾ ನಿಯಂತ್ರಣಕ್ಕೆ ರಷ್ಯಾ ಸಂಶೋಧನೆ ಮಾಡಿರುವ ಸ್ಪುಟ್ನಿಕ್-ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಈ ತಿಂಗಳು ಆರಂಭವಾಗಲಿದೆ. ನವೆಂಬರ್ ವೇಳೆಗೆ ಫಲಿತಾಂಶ ಹೊರಬರಲಿದೆ ಎಂದು ರಷ್ಯಾ ತಿಳಿಸಿದೆ. ಸ್ಪುಟ್ನಿಕ್-ವಿ ವಿಶ್ವದ ಮೊದಲ ಕರೊನಾ ಲಸಿಕೆ ಎನ್ನಲಾಗುತ್ತಿದೆ. ಈವರೆಗೆ ಈ ಲಸಿಕೆ ಕುರಿತು ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಈಗ ಭಾರತದ ಜತೆ ಲಸಿಕೆಯ ಕುರಿತು ಮಹತ್ವದ ಮಾಹಿತಿಯನ್ನು ರಷ್ಯಾ ಹಂಚಿಕೊಂಡಿದೆ.

ಲಸಿಕೆಯ ಸುರಕ್ಷತೆ ಬಗ್ಗೆ 1 ಮತ್ತು 2ನೇ ಹಂತದ ಕ್ಲಿನಿಕಲ್ ಟ್ರಯಲ್​ನ ಸಮಗ್ರ ದತ್ತಾಂಶವನ್ನು ರಷ್ಯಾ ಭಾರತಕ್ಕೆ ನೀಡಿದೆ. ಈ ಲಸಿಕೆ ಮಾನವರ ಮೇಲಿನ ಬಳಕೆಗೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಭಾರತದ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಾಸ್ಕೋದ ಗಮಲೇಯಾ ರಿಸರ್ಚ್ ಇನ್​ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ಅಧಿಕಾರಿಗಳ ಜತೆ ಭಾರತದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಭಾರತದಲ್ಲಿ ಕರೊನಾ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆಯ ಸರಬರಾಜು, ಸಹ ಅಭಿವೃದ್ಧಿ, ಸಹ ಉತ್ಪಾದನೆ ಸೇರಿ ವಿವಿಧ ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ರಷ್ಯಾದ ಭಾರತ ರಾಯಭಾರಿ ನಿಕೋಲಾಯ್ ಕುಡಾಶೇವ್ ತಿಳಿಸಿದ್ದಾರೆ.

ತಜ್ಞರಿಂದ ದತ್ತಾಂಶ ವಿಶ್ಲೇಷಣೆ ಬಳಿಕ ಭಾರತದಲ್ಲಿ ಶೀಘ್ರದಲ್ಲೇ ಸ್ಪುಟ್ನಿಕ್-ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ರಷ್ಯಾ ಲಸಿಕೆ ಬಗ್ಗೆ ಈಗಾಗಲೇ ಭರವಸೆ ವ್ಯಕ್ತಪಡಿಸಿರುವ ಲಾನ್ಸೆಟ್ ಅಧ್ಯಯನ, ಇದು ಯಾವುದೇ ಗಂಭೀರ ಅಡ್ಡಪರಿಣಾಮ ಉಂಟುಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ರಷ್ಯಾ ತನ್ನ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಸೌದಿ ಅರೇಬಿಯಾ, ಭಾರತ, ಯುಎಇ ಮತ್ತು ಬ್ರೆಜಿಲ್ ಸೇರಿ ಹಲವಾರು ದೇಶಗಳಲ್ಲಿ ನಡೆಸಲು ಉದ್ದೇಶಿಸಿದೆ. ಇದರ ಜತೆಗೆ ಸುಮಾರು 20ಕ್ಕೂ ಅಧಿಕ ದೇಶಗಳು ಈ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸಲು ಆಸಕ್ತಿ ತೋರಿಸಿವೆ ಎನ್ನಲಾಗಿದೆ. ಈ ಮೊದಲು ರಷ್ಯಾದ ಲಸಿಕೆಯ ಬಗ್ಗೆ ವಿಶ್ವಸಂಸ್ಥೆ ಸೇರಿ ಬಹುತೇಕ ರಾಷ್ಟ್ರಗಳ ತಜ್ಞರು ಅನುಮಾನ ವ್ಯಕ್ತಪಡಿಸಿದ್ದರು. ಕಡಿಮೆ ಅವಧಿಯಲ್ಲಿ ಎಲ್ಲ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಹೇಗೆ ಮುಗಿಸಲು ಸಾಧ್ಯ ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net