ಉಕ್ರೇನ್​ ಮೇಲೆ ಆಕ್ರಮಣ ಮಾಡಲು ರಷ್ಯಾ ಅಧ್ಯಕ್ಷ​ ವ್ಲಾಡಿಮಿರ್​ ಪುಟಿನ್​ ನಿರ್ಧರಿಸಿದ್ದಾರೆ: ಜೋ ಬೈಡೆನ್​

Jeo biden
Published on

ವಾಷಿಂಗ್ಟನ್​: ಉಕ್ರೇನ್​ ಮೇಲೆ ಆಕ್ರಮಣ ಮಾಡಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ನಿರ್ಧಾರ ಮಾಡಿರುವುದು ನನಗೆ ಮನದಟ್ಟದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ತಿಳಿಸಿದರು. ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಯುನೈಟೆಡ್ ಸ್ಟೇಟ್ಸ್ ಸೈನ್ಯವನ್ನು ಕಳುಹಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಬೈಡೆನ್​ ಸ್ಪಷ್ಟಪಡಿಸಿದರು.

ವೈಟ್​ಹೌಸ್​ನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್​, ರಾಜತಾಂತ್ರಿಕತೆಯನ್ನು ಆಯ್ದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸಿದರು. ಅಲ್ಲದೆ, ಇನ್ನು ಸಮಯ ಮಿಂಚಿಲ್ಲ ಈಗಲಾದರೂ ಉಲ್ಬಣವನ್ನು ತಗ್ಗಿಸಿ, ಸಂಧಾನದ ವೇದಿಕೆಗೆ ಮರಳುವಂತೆ ಬೈಡೆನ್​ ರಷ್ಯಾಗೆ ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಉಕ್ರೇನ್​ ಮೇಲೆ ಆಕ್ರಮಣ ಮಾಡಲು ರಷ್ಯಾ ಪಡೆಗಳು ಉದ್ದೇಶಿಸಿವೆ. ಉಕ್ರೇನ್​ ರಾಜಧಾನಿ ಕೈವ್​ ಅನ್ನು ಗುರಿಯಾಗಿಸಿದ್ದಾರೆ ಎಂದು ನಾವು ನಂಬಿದ್ದೇವೆ. ರಷ್ಯಾ ಯೋಜನೆಗಳ ವಿರುದ್ಧ ನಾವು ಪದೇಪದೆ ಜೋರಾಗಿ ಧ್ವನಿ ಎತ್ತುತ್ತಿದ್ದೇವೆ. ಏಕೆಂದರೆ ಅಮೆರಿಕ ಸಂಘರ್ಷವನ್ನು ಬಯಸುವುದಿಲ್ಲ ಮತ್ತು ಉಕ್ರೇನ್ ಆಕ್ರಮಣವನ್ನು ಸಮರ್ಥಿಸಲು ರಷ್ಯಾ ನೀಡಬಹುದಾದ ಯಾವುದೇ ಕಾರಣವನ್ನು ತೆಗೆದುಹಾಕಲು ಅಮೆರಿಕ ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದು ಬೈಡೆನ್​ ಹೇಳಿದರು.

ಒಂದು ವೇಳೆ ರಷ್ಯಾ ತನ್ನ ಯೋಜನೆಗಳನ್ನು ಅನುಸರಿಸಿದರೆ, ಅದು ದುರಂತ ಮತ್ತು ಅನಗತ್ಯ ಆಯ್ಕೆಯ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಬೈಡೆನ್​ ಒತ್ತಿ ಹೇಳಿದರು. ಅಮೆರಿಕ ತನ್ನ ಪಡೆಗಳನ್ನು ಹೋರಾಟ ಮಾಡಲು ಉಕ್ರೇನ್​ಗೆ ಕಳುಹಿಸುವುದಿಲ್ಲ. ಆದರೆ, ತನ್ನ ಬೆಂಬಲವನ್ನು ಉಕ್ರೇನಿಯನ್​ ಜನರಿಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಬೈಡೆನ್​ ಪರೋಕ್ಷವಾಗಿ ರಷ್ಯಾಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಉಕ್ರೇನ್​ ವಿಚಾರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಮುಂದುವರಿದಿದೆ. ಉಕ್ರೇನ್​ ನ್ಯಾಟೋ ಪಡೆ ಸೇರುವ ಬಯಕೆಯನ್ನು ಹೊಂದಿದ್ದರೆ, ಅದಕ್ಕೆ ರಷ್ಯಾ ವಿರೋಧಿಸಿದೆ. ಹೀಗಾಗಿ ಉಕ್ರೇನ್​ ಬೆಂಬಲಕ್ಕೆ ಅಮೆರಿಕ ನಿಂತಿದ್ದರೆ, ಉಕ್ರೇನ್​ ಅನ್ನು ಆಕ್ರಮಿಸಿಕೊಳ್ಳಲು ರಷ್ಯಾ ತುದಿಗಾಲಲ್ಲಿ ನಿಂತಿದೆ. ಅದರ ಭಾಗವಾಗಿ ಈಗಾಗಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸೇನೆಯನ್ನು ಸಹ ಜಮಾವಣೆ ಮಾಡಿದೆ. ಹೀಗಾಗಿ ಉಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧದ ಭೀತಿ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net