

ನವದೆಹಲಿ: ರಷ್ಯಾದ ಮಾಸ್ಕೋ ವಿಶ್ವವಿದ್ಯಾಲಯ ತಯಾರಿಸುತ್ತಿರುವ ಕರೊನಾ ಲಸಿಕೆ ಮಾನವರ ಮೇಲೆ ಪ್ರಯೋಗವನ್ನು (ಕ್ಲಿನಿಕಲ್ ಟ್ರಯಲ್) ಪೂರ್ಣಗೊಳಿಸಿದೆ ಹಾಗೂ ಅದು ಯಶಸ್ವಿಯಾಗಿದೆ ಎಂದು ಕಳೆದೆರಡು ದಿನಗಳಿಂದ ಭಾರಿ ಸುದ್ದಿಯಾಗುತ್ತಿದೆ.
ಹಾಗಿದ್ದರೆ, ಬಳಕೆಗೆ ಯಾವಾಗ ಮುಕ್ತವಾಗುತ್ತೆ, ರೋಗಿಗಳಿಗೆ ಯಾವಾಗ ಬಳಸಬಹುದು ಎಂಬ ಯಾವುದೇ ಮಾಹಿತಿ ಇರಲಿಲ್ಲ. ಇದರಿಂದಾಗಿ ತಜ್ಞರಲ್ಲೂ ಗೊಂದಲ ಮೂಡಿದ್ದವು.
ಮಾಸ್ಕೋದ ಸೆಚೆನೋವ್ ವಿಶ್ವವಿದ್ಯಾಲಯ ಹಾಗೂ ರಷ್ಯಾ ರಕ್ಷಣಾ ಇಲಾಖೆ ಸಹಯೋಗದಲ್ಲಿ ಇದನ್ನು ಅಭಿವೃದ್ಧಿ ಪಡಿಸುತ್ತಿದೆ. ಇಷ್ಟಕ್ಕೂ ಈ ಲಸಿಕೆ ಮಾನವರ ಮೇಲಿನ ಪ್ರಯೋಗದ ಮೊದಲ ಹಂತವನ್ನಷ್ಟೇ ಪೂರೈಸಿದೆ. ಕೇವಲ 18 ಯೋಧರ ಮೇಲಷ್ಟೇ ಪ್ರಯೋಗಿಸಲಾಗಿದೆ. ಎರಡನೇ ಹಂತದ ಪರೀಕ್ಷೆ ಸೋಮವಾರ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಎರಡನೇ ಹಂತದ ಪ್ರಯೋಗ ಲಸಿಕೆಯ ಕ್ಷಮತೆ, ದೇಹದಲ್ಲಿ ಪ್ರತಿರೋಧಕ ಶಕ್ತಿ ಉಂಟು ಮಾಡಲಿದೆಯೇ ಇಲ್ಲವೇ ಎಂಬುದು ಗೊತ್ತಾಗಬೇಕಿದೆ. ಲಸಿಕೆಯ ಅಸಲಿ ತಾಕತ್ತು ಗೊತ್ತಾಗುವುದು ಇಲ್ಲಿಯೇ. ಇದಲ್ಲದೇ, ಮೂರನೇ ಹಂತದ ಪರೀಕ್ಷೆಯನ್ನು ಸಾವಿರಾರು ಜನರ ಮೇಲೆ ಮಾಡಲಾಗುತ್ತದೆ. ಇದನ್ನು ರಷ್ಯಾದಲ್ಲಿ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಹೀಗಿರುವಾಗ ಆರಂಭದ ಹಂತದ ಪರೀಕ್ಷೆ ಎಂಬುದನ್ನು ತಿಳಿಸದೇ, ಯಶಸ್ವಿ ಎಂದು ಘೋಷಿಸಿದ್ದು ಅಚ್ಚರಿಗೂ ಕಾರಣವಾಗಿತ್ತು.
ಇನ್ನೊಂದೆಡೆ, ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಏಕೈಕ ಲಸಿಕೆ ಇದೆಂಬ ಹೆಗ್ಗಳಿಕೆಯೂ ಇದರದ್ದಾಗಿದೆ. ಸದ್ಯ ಜಗತ್ತಿನಲ್ಲಿ 140 ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಆ ಪೈಕಿ 14 ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ.