

ಮಾಸ್ಕೊ/ಕಿಯೆವ್: ರಷ್ಯಾ ಮೇ 9ರಂದು ವಿಕ್ಟರಿ ಡೇ ಆಚರಿಸುತ್ತಿದ್ದು, ಅದಕ್ಕೂ ಮೊದಲೇ ಅಝೊವಸ್ತಲ್ ಅನ್ನು ವಶಪಡಿಸಿಕೊಂಡು ಮರಿಯುಪೋಲ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ರಷ್ಯಾ ಸೇನೆ ಸಜ್ಜಾಗಿದೆ ಎಂದು ಬ್ರಿಟನ್ ಸೇನೆ ಎಚ್ಚರಿಸಿದೆ.
ಎರಡನೇ ವಿಶ್ವಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಯೂನಿಯನ್ ಗೆಲುವು ದಾಖಲಿಸಿದ ದಿನ ಮೇ 9 ಆಗಿದ್ದು, ಆ ದಿನವನ್ನು ರಷ್ಯಾ ವಿಕ್ಟರಿ ಡೇ ಎಂದು ಆಚರಿಸುತ್ತ ಬಂದಿದೆ. ಹೀಗಾಗಿ, ಈ ಐತಿಹಾಸಿಕ ದಿನದ ವೇಳೆ, ಮರಿಯುಪೋಲ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ ಯೂಕ್ರೇನ್ ಮೇಲೆ ಸಾಂಕೇತಿಕವಾಗಿ ಗೆಲುವು ಸಾಧಿಸಿದಂತೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಂಬಿದ್ದಾರೆ. ಅದನ್ನು ಈಡೇರಿಸಲು ಸೇನೆ ಹೊಸ ಹುರುಪಿನೊಂದಿಗೆ ಕೆಲಸ ಶುರುಮಾಡಿದೆ. ಅಝೊವಸ್ತಲ್ ಸ್ಟೀಲ್ ಪ್ಲಾಂಟ್ ಪ್ರದೇಶ ಯೂಕ್ರೇನ್ ಸೇನೆಯ ವಶವಿದ್ದು, ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ಅಲ್ಲಿಂದ ವ್ಯಕ್ತವಾಗಿದೆ. ಈ ಹೊಸ ಪ್ರಯತ್ನದಲ್ಲಿ ರಷ್ಯಾ ಸೇನೆ ವಿಲವಾದರೆ ಅದು ಇನ್ನಷ್ಟು ಹತಾಶ ಸ್ಥಿತಿಗೆ ತಳ್ಳಲ್ಪಡಲಿದೆ.
ಕೈದಿಗಳ ಅಮಾನವೀಯ ಪರೇಡ್
ಡೊನೆಟ್ಸ್ಕ್ನಲ್ಲಿ ಬಂಧಿತರಾಗಿರುವ ಯೂಕ್ರೇನ್ನ ಯುದ್ಧ ಕೈದಿಗಳ ಪರೇಡ್ ಅನ್ನು ರಷ್ಯಾ ಸೇನೆ ನಡೆಸಿದೆ. ಇದೇ ವೇಳೆ, ರಸ್ತೆ ಬದಿಯಲ್ಲಿದ್ದವರು ಈ ಕೈದಿಗಳ ಮೇಲೆ ತ್ಯಾಜ್ಯವನ್ನು ಎಸೆದು ಅಮಾನವೀಯ ವರ್ತನೆಯನ್ನು ತೋರಿದ್ದಾರೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
45 ಸೇನಾ ನೆಲೆಗಳ ನಾಶ
ಯೂಕ್ರೇನ್ಗೆ ಸಂಬಂಧಿಸಿದ 45 ಸೇನಾ ನೆಲೆ ಮತ್ತು ಸೌಲಭ್ಯಗಳನ್ನು ರಷ್ಯಾದ ವಾಯುಪಡೆ ನಾಶ ಪಡೆಸಿದೆ. ಲುಹಾನ್ಸ್ಕ್ ಪ್ರಾಂತ್ಯದ ಪೂರ್ವಭಾಗದಲ್ಲಿ ಗುರುವಾರ ನಡೆಸಿದ ದಾಳಿಯ ವೇಳೆ ಇವಿಷ್ಟೂ ನಾಶವಾಗಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೋರ್ ಕೊನಾಶೆನ್ಕೋವ್ ಹೇಳಿದ್ದಾರೆ.
ಉಪದೇಶ ಬೇಡ...
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನೀವು ಗೈರಾಗ ಬಾರದಿತ್ತು ಎಂದು ಬ್ರಿಟನ್ ಮತ್ತು ನಾರ್ದರ್ನ್ ಐರ್ಲೆಂಡ್ಗೆ ನೆದರ್ಲೆಂಡ್ಸ್ನ ರಾಯಭಾರಿ ಕಾರೆಲ್ ವ್ಯಾನ್ ಊಸ್ಟೆರೋಮ್ ಅವರು ಭಾರತದ ರಾಯಭಾರಿ ತಿರುಮೂರ್ತಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿ ಟ್ವೀಟ್ ಮಾಡಿದ ತಿರುಮೂರ್ತಿ ಅವರು, ನಮಗೆ ಉಪದೇಶ ಮಾಡಲು ಬರಬೇಡಿ. ನಾವೇನು ಮಾಡಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ತಿರುಗೇಟು ನೀಡಿದ್ದರು.