

ಮಾಸ್ಕೋ: ಅಣುಬಾಂಬ್, ಅಣುಶಕ್ತಿ ಹಾಗೂ ಅಣುಶಕ್ತಿ ಕ್ಷಿಪಣಿ ಸಿಡಿತಲೆಗಳನ್ನು ಹೊಂದಿರುವ ರಾಷ್ಟ್ರಗಳು ತಾವೇ ಮೊದಲಿಗೆ ಇಂಥ ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂಬ ನೀತಿಯನ್ನು ಹೊಂದಿವೆ. ಭಾರತವೂ ಇದಕ್ಕೆ ಹೊರತಲ್ಲ.
ಆದರೆ, ರಷ್ಯಾ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿದೆ. ತನ್ನ ಗಡಿಯಲ್ಲಿ ಯಾರಿಂದಲೇ ಕ್ಷಿಪಣಿ ದಾಳಿ ನಡೆದರೂ ಅದನ್ನು ಅಣುಶಕ್ತಿ ಹೊಂದಿದ ಕ್ಷಿಪಣಿಗಳ ದಾಳಿ ಎಂದೇ ಪರಿಗಣಿಸುವುದಾಗಿ ಹೇಳಿದೆ.
ಇದರೊಂದಿಗೆ, ಅಣುಶಕ್ತಿ ಬಳಸಿದರಷ್ಟೇ ಪ್ರತಿದಾಳಿಯಲ್ಲಿ ಅಣುಶಕ್ತಿ ಬಳಸಲಾಗುತ್ತದೆ ಎಂಬ ಸಾಂಪ್ರದಾಯಿಕ ನೀತಿಯಿಂದ ಹಿಂದೆ ಸರಿದಿದೆ. ತನ್ನ ಮೇಲೆ ಯಾವುದೇ ದಾಳಿಯಾದರೂ ಅದನ್ನು 'ನ್ಯೂಕ್ಲಿಯರ್ ಅಟ್ಯಾಕ್' ಎಂದೇ ಪರಿಗಣಿಸಲಿದೆ. ಪ್ರತಿಯಾಗಿ ಅಣುದಾಳಿಯನ್ನೇ ನಡೆಸಲಾಗುತ್ತದೆ ಎಂದು ತನ್ನ ವಿರೋಧಿ ರಾಷ್ಟ್ರಗಳಿಗೆ ಎಚ್ಚರಿಕೆ ರವಾನಿಸಿದೆ.
ಇದು ಯಾವ ದೇಶವನ್ನು ಕುರಿತು ಹೇಳಿದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ರಷ್ಯಾದ ಅಧಿಕೃತ ಸೇನಾ ಪತ್ರಿಕೆ ರೆಡ್ ಸ್ಟಾರ್ನಲ್ಲಿ ಪ್ರಕಟಗೊಂಡ ಲೇಖನದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.
ರಷ್ಯಾ ಸೇನೆಯ ಅನೇಕ ಹಿರಿಯ ಅಧಿಕಾರಿಗಳು ಈ ಲೇಖನದಲ್ಲಿ ನ್ಯೂಕ್ಲಿಯರ್ ನೀತಿಯ ಬಗ್ಗೆ ಮಾತನಾಡಿದ್ದಾರೆ. ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಷ್ಯಾದ ಮೇಲೆ ಕ್ಷಿಪಣಿ ದಾಳಿ ನಡೆಯುತ್ತಿರುವಾಗ ಅದು ಸಾಮಾನ್ಯ ಸಿಡಿತಲೆ ಅಥವಾ ಅಣುಶಕ್ತಿಚಾಲಿತ ಸಿಡಿತಲೆ ಹೊಂದಿದೆಯೇ ಎಂಬುದನ್ನು ಹೇಳಲಿಕ್ಕಾಗದು. ಹೀಗಾಗಿ ಸೇನೆ ಅಂಥ ದಾಳಿಯನ್ನು ನ್ಯೂಕ್ಲಿಯರ್ ದಾಳಿ ಎಂದೇ ಪರಿಗಣಸುತ್ತದೆ. ಅದೇ ರೀತಿಯಲ್ಲಿ ಪ್ರತಿ ದಾಳಿ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.