

ಬೆಂಗಳೂರು: ಹೊಸ ಕರೊನಾ ಪ್ರಕರಣಗಳಲ್ಲಿ ರಾಜ್ಯ ಮತ್ತೊಂದು ದಾಖಲೆಯನ್ನೇ ಮಾಡಿದೆ. ಕಳೆದ 24 ತಾಸುಗಳಲ್ಲಿ (ಶುಕ್ರವಾರ ಸಂಜೆ ಐದರಿಂದ ಶನಿವಾರ ಸಂಜೆ ಐದು ಗಂಟೆವರೆಗೆ) 7,178 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಂದೇ ದಿನ ಅತಿ ಹೆಚ್ಚು ಕೇಸ್ಗಳು ವರದಿಯಾದಂತಾಗಿದೆ.
ಕಳೆದ ಒಂದು ವಾರದಿಂದ 4,000 ದಿಂದ 5,000 ಕೇಸ್ಗಳಿರುತ್ತಿದ್ದ ಪ್ರಮಾಣ ಈಗ 6,000ದಿಂದ 7,000ಕ್ಕೆ ಏರಿದಂತಾಗಿದೆ. ರಾಜ್ಯದಲ್ಲಿರುವ ಒಟ್ಟು ಸೋಂಕಿತರ ಸಂಖ್ಯೆ 1,72,102ಕ್ಕೆ ಏರಿದೆ. ಅಂತೆಯೇ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79,765ಕ್ಕೆ ತಲುಪಿದೆ. ಸದ್ಯ ಕೋವಿಡ್ ಕೇಸ್ಗಳ ವೃದ್ಧಿದರದಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ, ಹೊಸ ಕೋವಿಡ್ ಕೇಸ್ಗಳಲ್ಲಿಯೂ ಮೊದಲ ಸ್ಥಾನ ಪಡೆಯುವಂತಾದರೆ ಅಚ್ಚರಿ ಇಲ್ಲ.
ಒಟ್ಟು 93 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3,091ಕ್ಕೆ ಹೆಚ್ಚಳವಾಗಿದೆ. ಇದರ ಜತೆಗೆ ಐಸಿಯುದಲ್ಲಿ ಚಿಕಿತ್ಸೆ ಪಡೆಯುವರ ಸಂಖ್ಯೆ ಕೂಡ 700ರ ಗಡಿ ತಲುಪಿದ್ದು, 683 ಜನರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಮಾಧಾನದ ಅಂಶವೆಂದರೆ ಇಂದು 5,006 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಚೇತರಿಕೆ ಕಂಡವರು 89,238 ಮಂದಿ.
ಇನ್ನು ಬೆಂಗಳೂರಿನಲ್ಲಿ 2,665 ಜನ ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 72,237 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಇಂದಿನ ಸಂಖ್ಯೆ 2,229. ಗುಣವಾದವರು 37,292 ಮಂದಿ. ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ಇಂದಿನ 18 ಸಾವು ಸೇರಿ ಒಟ್ಟಾರೆ ಮೃತಪಟ್ಟವರು 1,218.
ರಾಜಧಾನಿಯಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿನ ಏರಿಳಿತಗಳಿದ್ದರೂ ಜಿಲ್ಲಾ ಕೇಂದ್ರಗಳಲ್ಲಿ ಭಾರಿ ಹೆಚ್ಚಳ ಕಂಡು ಬರುತ್ತಿದೆ. ಮೊದಲೆಲ್ಲ ಹೊಸ ರೋಗಿಗಳಲ್ಲಿ ರಾಜಧಾನಿಯ ಪ್ರಮಾಣವೇ ಶೇ.50ಕ್ಕಿಂತ ಹೆಚ್ಚಾಗಿರುತ್ತಿದದರೆ, ಈಗ ಜಿಲ್ಲಾ ಕೇಂದ್ರಗಳ ಪಾಲು ಶೇ.60ಕ್ಕಿಂತ ಅಧಿಕವಾಗುತ್ತಿದೆ. ಇದು ಆತಂಕಕ್ಕೂ ಕಾರಣವಾಗಿದೆ.
ಜಿಲ್ಲಾವಾರು ಅಂಕಿ-ಸಂಖ್ಯೆ ವಿವರ