

ಹಾವೇರಿ: ಯುದ್ಧಪೀಡಿತ ಯೂಕ್ರೇನ್ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್ ದಾಳಿಗೆ ಮಂಗಳವಾರ ಹಾವೇರಿ ಜಿಲ್ಲೆಯ ಯುವಕ ನವೀನ ಗ್ಯಾನಗೌಡರ ಬಲಿಯಾಗಿದ್ದು, ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
'ಇಂದು ಬೆಳಗ್ಗೆ ಫೋನ್ನಲ್ಲಿ ಮಾತನಾಡಿದ ನವೀನ ಮತ್ತೆ ಫೋನ್ ಎತ್ತಿಲ್ಲ. ಎಂಬಿಬಿಎಸ್ ಕಲಿತು ಬರುತ್ತೇನೆ ಎಂದು ಹೇಳಿ ಹೋಗಿದ್ದೆಲ್ಲೋ... ಎಲ್ಲಿ ಹೋದಿಯೋ ಮಗನೇ... ಎಂದು ಮೃತನ ತಾಯಿ ವಿಜಯಲಕ್ಷ್ಮಮ್ಮ ಹಾಗೂ ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆ ಶೇಖನಗೌಡ್ರ ಮಗನ ಮರಣದ ಸುದ್ದಿ ಕೇಳಿ, ದಿಗ್ಭ್ರಮೆಗೊಂಡಿದ್ದು, ಯಾರೊಂದಿಗೂ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದಾರೆ.
ನವೀನನ ತಂದೆಗೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಮೂರು ದಿನಗಳಲ್ಲಿ ಡೆಡ್ ಬಾಡಿ ತರಿಸೋಕೆ ಪ್ರಯತ್ನ ಮಾಡಲಾಗುವುದು. ನೀವು ಧೈರ್ಯವಾಗಿರಿ. ನಾವು ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವೇ ಧೈರ್ಯ ಕಳಕೊಂಡ್ರೆ ಕುಟುಂಬದ ಸ್ಥಿತಿ ಹೇಗೆ? ಎಂದು ಶೇಖನಗೌಡ್ರ ಅವರನ್ನು ಯಡಿಯೂರಪ್ಪ ಸಂತೈಸಿದರು.