ರಷ್ಯಾದಿಂದ 3.2 ಕೋಟಿ ಡೋಸ್​ ಲಸಿಕೆ ಖರೀದಿಸಿದ ಮೆಕ್ಸಿಕೋ; ಸ್ಪುಟ್ನಿಕ್​-ವಿ ಹೆಚ್ಚಾಯ್ತು ಬೇಡಿಕೆ

vaccine
Published on

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳು ಔಷಧವನ್ನು ಮಾರುಕಟ್ಟೆಗೆ ಪರಿಚಯಿಸಲು ಇನ್ನು ಕೆಲ ತಿಂಗಳಾದರೂ ಬೇಕು ಎನ್ನುತ್ತಿವೆ. ಆದರೆ ಇನ್ನೊಂದೆಡೆ, ಸದ್ದಿಲ್ಲದೇ ಲಸಿಕೆಯನ್ನು ಸಂಶೋಧಿಸಿ, ನೋಂದಣಿಯನ್ನು ಮಾಡಿ ಸಾರ್ವತ್ರಿಕ ಬಳಕೆಗೆ ಮುಕ್ತವಾಗಿಸುತ್ತಿರುವ ರಷ್ಯಾ 3.2 ಕೋಟಿ ಡೋಸ್​ ಲಸಿಕೆಯನ್ನು ಮೆಕ್ಸಿಕೋಗೆ ಮಾರಾಟ ಮಾಡಲು ಮುಂದಾಗಿದೆ.

ರಷ್ಯಾ ಸರ್ಕಾರಿ ಅಧೀನದ ಮಾಸ್ಕೋದಲ್ಲಿರುವ ಗಾಮೆಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್​--ವಿ ಲಸಿಕೆ ನೋಂದಣಿಯಾಗಿದ್ದರೂ, ಮೂರನೇ ಹಂತದಲ್ಲಿ 40 ಸಾವಿರ ಜನರ ಮೇಲೆ ಪ್ರಯೋಗ ನಡೆಸುತ್ತಿದೆ. ಈ ಸಂಶೋಧನೆ ಧನ ಸಹಾಯ ಮಾಡಿದ್ದ ರಷ್ಯಾ ನೇರ ಹೂಡಿಕೆ ನಿಧಿ (ಆರ್​ಡಿಐಎಫ್​) ಮೆಕ್ಸಿಕೋಗೆ 3.2 ಕೋಟಿ ಡೋಸ್​ ಲಸಿಕೆ ಮಾರಾಟ ಮಾಡಲು ಬುಧವಾರ ಒಪ್ಪಂದ ಮಾಡಿಕೊಂಡಿದೆ.

ಇದು ಲಸಿಕೆಗೆ ಸಂಬಂಧಿಸಿದಂತೆ ರಷ್ಯಾದ ಎರಡನೇ ಮಾರಾಟ ಒಪ್ಪಂದವಾಗಿದೆ. ಈ ಮೊದಲು ಆಗಸ್ಟ್​ನಲ್ಲಿ ಕಜಕಿಸ್ತಾನ ಜತೆಗೆ ಖರೀದಿ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ 20 ಲಕ್ಷ ಡೋಸ್​ ಬಳಿಕ ಇದನ್ನು 50 ಲಕ್ಷ ಡೋಸ್​ಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಕರೊನಾ ನಿಗ್ರಹಕ್ಕೆ ಜಗತ್ತಿನ ಮೊದಲ ಲಸಿಕೆ ಸಿದ್ಧವಾಗಿದೆ ಎಂದು ಘೋಷಿಸುತ್ತಿದ್ದಂತೆ, 10ಕ್ಕೂ ಹೆಚ್ಚು ದೇಶಗಳು ಲಸಿಕೆ 10 ಕೋಟಿಗೂ ಅಧಿಕ ಡೋಸ್ ಖರೀದಿಗೆ ಉತ್ಸುಕವಾಗಿವೆ ಎಂದು ರಷ್ಯಾ ಹೇಳಿತ್ತು.

ಈ ಲಸಿಕೆಯ ಉತ್ಪಾದನೆಗೆ ಭಾರತದ ನೆರವು ಕೋರಿರುವ ರಷ್ಯಾ, ಮೂರನೇ ಹಂತದ ಪರೀಕ್ಷೆಗೂ ಅನುಮತಿ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net