

Russia: ಯುಕ್ರೇನ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದೊಡ್ಡ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿದೆ. ದಾಳಿಯಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದು,12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಯುಕ್ರೇನಿಯನ್ ಅಧಿಕಾರಿಗಳು ಶನಿವಾರ (ಸೆಪ್ಟೆಂಬರ್,20) ತಿಳಿಸಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪ್ರೊಪೆಟ್ರೋವ್ಸ್ಕ್, ಮೈಕೊಲೈವ್, ಚೆರ್ನಿಹಿವ್, ಜಪೋರಿಝಿಯಾ, ಪೊಲ್ಟವಾ, ಕೈವ್, ಒಡೆಸಾ, ಸುಮಿ ಮತ್ತು ಖಾರ್ಕಿವ್ ಸೇರಿದಂತೆ ಒಂಬತ್ತು ಪ್ರದೇಶದ ಮೇಲೆ ರಷ್ಯಾ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಝೆಲೆನ್ಸ್ಕಿ, ಶತ್ರುಗಳ ಗುರಿ ನಮ್ಮ ಮೂಲಸೌಕರ್ಯ, ವಸತಿ ಪ್ರದೇಶಗಳು ಮತ್ತು ನಾಗರಿಕ ಉದ್ಯಮಗಳಾಗಿತ್ತು. ಅಲ್ಲದೆ, ಕ್ಲಸ್ಟರ್ ಯುದ್ಧಸಾಮಗ್ರಿಗಳನ್ನು ಹೊಂದಿದ ಕ್ಷಿಪಣಿಯು ಡ್ನಿಪ್ರೊ ನಗರದ ಬಹುಮಹಡಿ ಕಟ್ಟಡವನ್ನು ಹೊಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರತಿಯೊಂದು ದಾಳಿಯು ಮಿಲಿಟರಿ ಅವಶ್ಯಕತೆಯಲ್ಲ, ಬದಲಾಗಿ ನಾಗರಿಕರನ್ನು ಬೆದರಿಸಲು ಮತ್ತು ನಮ್ಮ ಮೂಲಸೌಕರ್ಯವನ್ನು ನಾಶಮಾಡಲು ರಷ್ಯಾದ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಅಲ್ಲದೆ, ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡುವ ನಿರೀಕ್ಷೆಯಿದೆ. ಯುಕ್ರೇನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ಮಹಿಳೆಯರು ಮಕ್ಕಳನ್ನು ಒಳಗೊಂಡ ಮಾನವೀಯ ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರತ್ಯೇಕ ಮಾತುಕತೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಗವರ್ನರ್ ಸೆರ್ಹಿ ಲೈಸಾಕ್, ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ 26 ಜನರು ಗಾಯಗೊಂಡಿದ್ದಾರೆ. ಪೂರ್ವ ನಗರವಾದ ಡ್ನಿಪ್ರೊದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು ಮತ್ತು ಮನೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ರಷ್ಯಾ 619 ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಕ್ರೇನ್‌ನ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟಾರೆಯಾಗಿ, 579 ಡ್ರೋನ್‌ಗಳು, ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 32 ಕ್ರೂಸ್ ಕ್ಷಿಪಣಿಗಳು ಪತ್ತೆಯಾಗಿವೆ. ಉಕ್ರೇನಿಯನ್ ಪಡೆಗಳು 552 ಡ್ರೋನ್‌ಗಳು, ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಿ ತಟಸ್ಥಗೊಳಿಸಿವೆ ಎಂದು ಮಾಹಿತಿ ನೀಡಿದೆ. (ಏಜೆನ್ಸೀಸ್)