

Russia attack: ಯುಕ್ರೇನ್ ರಾಜಧಾನಿ ಕೈವ್ನ ಬಳಿ ಇರುವ ಪೆಚೆರ್ಸ್ಕಿ ಮೇಲೆ ರಷ್ಯಾ ದಾಳಿ ಮಾಡಿದ್ದು, ದಾಳಿಯ ರಬ್ಬಸಕ್ಕೆ ಆಡಳಿತ ಕಟ್ಟಡದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯುಕ್ರೇನ್ ರಾಜಧಾನಿಯ ಮಿಲಿಟರಿ ಆಡಳಿತದ ಮುಖ್ಯಸ್ಥ ತೈಮೂರ್ ಟ್ಕಾಚೆಂಕೊ ಭಾನುವಾರ (ಸೆಪ್ಟೆಂಬರ್,7) ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ರಷ್ಯಾವು ಕೈವ್ ಮೇಲೆ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಶಿಶು ಸೇರಿದಂತೆ ಮೂವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಕಚೇರಿ ಸೇರಿದಂತೆ ರಾಜಧಾನಿಯಲ್ಲಿ ಹಲವಾರು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ನಗರದ ಮೇಲೆ ಡ್ರೋನ್ಗಳ ಮಳೆ ಸುರಿಸಿದ ನಂತರ ಕ್ಷಿಪಣಿ ದಾಳಿ ಪ್ರಾರಂಭವಾಯಿತು ಎಂದು ವಿಟಾಲಿ ಹೇಳಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯುಕ್ರೇನ್ ಅಧಿಕಾರಿಗಳು, ಡಾರ್ನಿಟ್ಸ್ಕಿಯಲ್ಲಿರುವ ವಸತಿ ಕಟ್ಟಡದ ನಾಲ್ಕು ಅಂತಸ್ತುಗಳಲ್ಲಿ ಎರಡರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಂಪೂರ್ಣ ನಾಶವಾಗಿದೆ ಎಂದು ರಾಜ್ಯ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ರಷ್ಯಾದ ಡ್ರೋನ್ ದಾಳಿಗೆ 16 ಅಂತಸ್ತಿನ ಅಪಾರ್ಟ್ಮೆಂಟ್ ಮತ್ತು ಇನ್ನೂ ಎರಡು 9 ಅಂತಸ್ತಿನ ಕಟ್ಟಡಗಳಲ್ಲಿ ಬೆಂಕಿಯನ್ನು ಹೊತ್ತಿಕೊಂಡಿವೆ. ಈ ಬಗ್ಗೆ ಯುಕ್ರೇನ್ ಅಧಿಕಾರಿಗಳು ಎಕ್ಸ್ನಲ್ಲಿ ಪೋಸ್ಟ್ ಮಡಿದ್ದು, ಅಪಾರ್ಟ್ಮೆಂಟ್ ಕಟ್ಟಡಗಳಿಂದ ಹೊಗೆ ಹೊರಬರುವುದನ್ನು ತೋರಿಸಿದವು, ಕೆಲವು ಮಹಡಿಗಳು ಭಾಗಶಃ ಕುಸಿದಿವೆ ಮತ್ತು ಮುಂಭಾಗಗಳು ಕುಸಿದಿವೆ.
ರಷ್ಯಾ ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ನಾಗರಿಕರ ಮೇಲೆ ದಾಳಿ ಮಾಡುತ್ತಿದೆ ಎಂದು ಟಕಾಚೆಂಕೊ ಹೇಳಿದ್ದಾರೆ.ಅಲ್ಲದೆ, ಯುಕ್ರೇನ್ನ ಕೇಂದ್ರ ನಗರವಾದ ಕ್ರೆಮೆನ್ಚುಕ್ನಲ್ಲಿ ಡಜನ್ಗಟ್ಟಲೆ ಸ್ಫೋಟಗಳು ಸಂಭವಿಸಿದ್ದು, ಹಲವು ಪ್ರದೇಶಗಳಿಗೆ ವಿದ್ಯುತ್ ಕಡಿತಗೊಂಡಿದೆ ಎಂದು ಮೇಯರ್ ವಿಟಾಲಿ ಮಾಲೆಟ್ಸ್ಕಿ ತಿಳಿಸಿದ್ದಾರೆ.
2022ರ ಫೆಬ್ರವರಿಯಲ್ಲಿ ರಷ್ಯಾ ಯುಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿತು. ರಷ್ಯಾ ದಾಳಿಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ರಷ್ಯಾವು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಯುಕ್ರೇನ್ ಆರೋಪ ಮಾಡಿದೆ.(ಏಜೆನ್ಸೀಸ್)