ಯೂಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ಮಳೆ; ನ್ಯಾಟೋ, ಅಮೆರಿಕ, ಯುರೋಪ್ ನಿರ್ಬಂಧ

Nation Ukraine
Published on

ಕೆಲ ದಿನಗಳಿಂದ ರಷ್ಯಾ ಹಾಗೂ ಯೂಕ್ರೇನ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ಈಗ ಯುದ್ಧಕ್ಕೆ ತಿರುಗಿದ್ದು, ಗುರುವಾರ ಬೆಳಗ್ಗೆ ರಷ್ಯಾ ಸೇನೆ ಯೂಕ್ರೇನ್ ಮೇಲೆ ಕ್ಷಿಪಣಿಗಳ ಮಳೆ ಸುರಿಸಿದೆ. ಭಾರಿ ಪ್ರಮಾಣ ಹಾನಿ ಉಂಟಾಗಿದೆ. ಯೂಕ್ರೇನ್ ಪಡೆಯೂ ತಿರುಗೇಟು ನೀಡಿದ್ದು, ರಷ್ಯಾದ ಹಲವು ಯುದ್ಧ ವಿಮಾನ, ಹೆಲಿಕಾಪ್ಟರ್​ಗಳನ್ನು ಹೊಡೆದುರುಳಿಸಿದೆ. 100ಕ್ಕೂ ಅಧಿಕ ಯೋಧರು, ನಾಗರಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಾಸೋವ್: ಯೂಕ್ರೇನ್ ಮೇಲೆ ಪೂರ್ವ, ಉತ್ತರ ಮತ್ತು ದಕ್ಷಿಣ ಮೂರು ಭಾಗಗಳಲ್ಲಿ ರಷ್ಯಾ ಸೇನೆ ಗುರುವಾರ ದಾಳಿ ಆರಂಭಿಸಿದೆ. ಮೊದಲ ದಿನ ಯೂಕ್ರೇನ್​ನ 70 ಸೇನಾ ನೆಲೆ ನಾಶ ಪಡಿಸಲಾಗಿದ್ದು, ಇದರಲ್ಲಿ 11 ವಾಯುನೆಲೆಗಳಿವೆ ಎಂದು ರಷ್ಯಾ ಹೇಳಿದೆ. ಯೂಕ್ರೇನ್ ರಾಜಧಾನಿ ಕಿಯೆವ್ ಮತ್ತು ಇತರೆ ನಗರಗಳ ಮೇಲೆ ಬಾಂಬ್, ಕ್ಷಿಪಣಿ ದಾಳಿಯನ್ನು ರಷ್ಯಾ ಸೇನೆ ನಡೆಸಿತ್ತು. ಈ ಪೂರ್ಣಪ್ರಮಾಣದ ದಾಳಿಯಲ್ಲಿ ಕನಿಷ್ಠ 40 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ನಾಶನಷ್ಟಗಳನ್ನು ಇನ್ನೂ ಅಂದಾಜಿಸಲಾಗಿಲ್ಲ. ಯೂಕ್ರೇನ್ ಪ್ರವೇಶಿಸಿದ 50 ರಷ್ಯನ್ನರನ್ನು ಹೊಡೆದುರುಳಿಸಲಾಗಿದೆ ಎಂದು ಯೂಕ್ರೇನ್ ಸರ್ಕಾರ ತಿಳಿಸಿದೆ. ಮಾಸ್ಕೋದ ಹಿಡಿತದಿಂದ ತಪ್ಪಿಸಿ ಪಾಶ್ಚಿಮಾತ್ಯ ರಾಷ್ಟ್ರಗಳತ್ತ ಚಿತ್ತ ಹರಿಸಿರುವ ಯೂಕ್ರೇನ್​ನ ಸಂಪೂರ್ಣ ನಾಶವನ್ನು ರಷ್ಯಾ ಬಯಸುತ್ತಿದೆ ಎಂದು ಅದು ಆರೋಪಿಸಿದೆ. ಈ ನಡುವೆ, ರಷ್ಯಾ ದಾಳಿ ಆರಂಭವಾಗುತ್ತಿದ್ದಂತೆ ತಲ್ಲಣಗೊಂಡಿರುವ ಜನರು ರೈಲು ಮತ್ತು ಕಾರುಗಳ ಮೂಲಕ ಸಮರಾಂಗಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನ್ಯಾಟೋ ಮತ್ತು ಯುರೋಪ್ ನಾಯಕರು ಯೂಕ್ರೇನ್​ಗೆ ಬೆಂಬಲ ಸೂಚಿಸಿ ಮಾತನಾಡುತ್ತಿದ್ದಾರೆ. ಆದರೆ, ಸೇನಾ ಪ್ರತಿ ಕಾರ್ಯಾಚರಣೆಯನ್ನು ಅಧಿಕೃತವಾಗಿ ಆರಂಭಿಸಿಲ್ಲ.

ಏರ್ ಇಂಡಿಯಾ ವಿಮಾನ ವಾಪಸ್: ಯೂಕ್ರೇನ್​ನ ವಿಮಾನ ನಿಲ್ದಾಣ ಬಂದ್ ಆಗಿರುವ ಕಾರಣ, ಭಾರತೀಯರನ್ನು ಕರೆತರಲು ಹೋಗಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ಮರಳಿದೆ. ಟಿಕೆಟ್ ದರ 1 ಲಕ್ಷ ರೂಪಾಯಿ ಆಗಿದ್ದು, ಹಲವು ವಿದ್ಯಾರ್ಥಿಗಳು ಹಣ ಹೊಂದಿಸಲು ಕಷ್ಟಪಡುತ್ತಿದ್ದಾರೆ. ಡಾಲರ್ ವಿನಿಮಯ ಸ್ಥಗಿತವಾಗಿರುವ ಕಾರಣ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನ್ಯಾಟೋ ಎನ್​ಆರ್​ಎಫ್ ಪಡೆ ನಿಯೋಜನೆ ಇಲ್ಲ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನ್ಯಾಟೋ ಪ್ರತಿನಿಧಿಗಳು ಗುರುವಾರ ತುರ್ತು ಸಭೆ ನಡೆಸಿದರು. 30 ರಾಷ್ಟ್ರಗಳ ಸಂಘಟನೆಯಾಗಿರುವ ನ್ಯಾಟೋ, ಯೂಕ್ರೇನ್​ಗೆ ಬೆಂಬಲ ನೀಡಲು ಸಿದ್ಧತೆ ನಡೆಸುತ್ತಿದೆ. ರಷ್ಯಾದ ಆಕ್ರಮಣಕಾರಿ ನಡವಳಿಕೆಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ. ಇದರಿಂದಾಗಿ ಯೂರೋ-ಅಟ್ಲಾಂಟಿಕ್ ಭಾಗದ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ. ನ್ಯಾಟೊ ತನ್ನ ಸದಸ್ಯ ರಾಷ್ಟ್ರಗಳ ನೆರವಿಗೆ ಎಲ್ಲ ರೀತಿಯಲ್ಲೂ ಬದ್ಧವಾಗಿದೆ ಎಂದು ನ್ಯಾಟೋ ಸಭೆ ಹೇಳಿದೆ. ನ್ಯಾಟೋ ರೆಸ್ಪಾನ್ಸ್ ಫೋರ್ಸ್ (ಎನ್​ಆರ್​ಎಫ್) 40,000 ಟ್ರೂಪ್​ಗಳ ಪಡೆಯಾಗಿದ್ದು, ಇದರಲ್ಲಿ 5,000 ಟ್ರೂಪ್ ಫ್ರಾನ್ಸ್​ನ ನಾಯಕತ್ವದಲ್ಲಿದೆ. ಇದರಲ್ಲಿ ಜರ್ಮನಿ, ಪೊಲೆಂಡ್, ಪೋರ್ಚುಗಲ್, ಸ್ಪೇನ್​ನ ಟ್ರೂಪ್​ಗಳಿವೆ. ಇದು ಹೈ ಅಲರ್ಟ್​ನಲ್ಲಿವೆ. ಅಮೆರಿಕದ ಪೆಂಟಗನ್ ಕೂಡ 8,500 ಟ್ರೂಪ್​ಗಳನ್ನು ಹೈ ಅಲರ್ಟ್​ನಲ್ಲಿ ಇರಿಸಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯೂಕ್ರೇನ್​ನಲ್ಲಿ ಸೇನೆ ನಿಯೋಜನೆ ಮಾಡುವುದಿಲ್ಲ ಎಂದು ನ್ಯಾಟೊ ಹೇಳಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿ ಸಭೆ ನಡೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಎಸ್​ಎಸ್​ಎ ಅಜಿತ್ ದೋವಲ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಸಭೆಯಲ್ಲಿ ಹಾಜರಿದ್ದರು. ಪ್ರಧಾನಿ ಮೋದಿ ಶೀಘ್ರವೇ ಪುತಿನ್ ಅವರ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಪಾಶ್ಚಾತ್ಯರಿಂದ ಕ್ಷಿಪ್ರ ಪ್ರತಿಕ್ರಿಯೆ

  • ರಷ್ಯಾದ ದಾಳಿಯು ಯುದ್ಧದ ದಾರುಣ ನಡವಳಿಕೆಯಾಗಿದ್ದು, ಯುರೋಪ್ ಖಂಡದಲ್ಲಿ ಶಾಂತಿ ಕದಡಿದೆ ಎಂದು ನ್ಯಾಟೋದ ಸೆಕ್ರೆಟರಿ ಜನರಲ್ ಜೆನ್ಸ್ ಸ್ಟೋಲ್ಟನ್ ಬರ್ಗ್ ಹೇಳಿದರು.
  • ಪುತಿನ್ ಪೂರ್ವಯೋಜಿತ ರೀತಿಯಲ್ಲಿ ಅಪ್ರಚೋದಿತ ಸಮರವನ್ನು ಸಾರಿದ್ದಾರೆ. ಇದು ಜೀವ ನಷ್ಟವನ್ನು ಉಂಟುಮಾಡಲಿದೆ. ಅದೇ ರೀತಿ ಮನುಷ್ಯರು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದರು.
  • ನಮ್ಮ ಯುರೋಪ್ ಖಂಡದಲ್ಲಿ ಪುತಿನ್ ಅವರು ಯುದ್ಧ ಆರಂಭಿಸಿಬಿಟ್ಟರು. ಬ್ರಿಟನ್ ಇದನ್ನು ನೋಡುತ್ತ ಸುಮ್ಮನೆ ಕೂರುವುದು ಸಾಧ್ಯವೇ ಇಲ್ಲ. ನಮ್ಮ ಗುರಿ ಸ್ಪಷ್ಟವಾಗಿದೆ, ರಾಜತಾಂತ್ರಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂರ್ದಭಿಕವಾಗಿ ಸೇನಾ ಕಾರ್ಯಾಚರಣೆ ಮೂಲಕ ಕ್ರಮ ತೆಗೆದುಕೊಳ್ಳುತ್ತೇವೆ. ವ್ಲಾದಿಮಿರ್ ಪುತಿನ್ ಅವರ ಈ ಭೀಕರ ಮತ್ತು ಅನಾಗರಿಕ ಸಾಹಸವು ಸೋಲಿನೊಂದಿಗೆ ಕೊನೆಗೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದರು.
  • ರಷ್ಯಾ ದಾಳಿಯು ಖಂಡನೀಯ. ಯೂಕ್ರೇನ್ ಪಾಲಿಗೆ ಇದು ಭಯಾನಕ ಮತ್ತು ಯುರೋಪ್​ಗೆ ಇದು ಕರಾಳ ದಿನ ಎಂದು ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಝ್ ಟೀಕಿಸಿದರು.

ಮೋದಿಗೆ ಯೂಕ್ರೇನ್ ಮನವಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಅವರ ಮಾತಿಗೆ ಜಾಗತಿಕ ನಾಯಕರು ಗೌರವ ನೀಡುತ್ತಾರೆ. ರಷ್ಯಾ ಜತೆಗೆ ವ್ಯೂಹಾತ್ಮಕ ಪಾಲುದಾರಿಕೆ ಹೊಂದಿರುವ ಮೋದಿಯವರು ರಷ್ಯಾ ಅಧ್ಯಕ್ಷ ಪುತಿನ್ ಜತೆಗೆ ಮಾತನಾಡಿದರೆ, ಅವರು ಅದನ್ನು ತಳ್ಳಿಹಾಕಲಾರರು. ನಮ್ಮ ದೇಶದ ಜನರ ಸುರಕ್ಷತೆಯಷ್ಟೇ ಅಲ್ಲ ಭಾರತೀಯರ ಸುರಕ್ಷತೆಯೂ ಅಗತ್ಯ. ನಮ್ಮ ದೇಶದಲ್ಲಿ 20000ಕ್ಕೂ ಹೆಚ್ಚು ಭಾರತೀಯರಿದ್ದಾರೆ. ನಮ್ಮ ನಡುವೆ ಐತಿಹಾಸಿಕ ರಾಜತಾಂತ್ರಿಕ ಸಂಬಂಧವಿದೆ. ಯುದ್ಧ ತಪ್ಪಿಸಲು ಪರಿಹಾರ ಹುಡುಕಬೇಕು ಎಂದು ಮಹಾಭಾರತದಲ್ಲೂ ಹೇಳಲಾಗಿದೆ. ಈ ವಿಚಾರವಾಗಿ ನಾವು ಆಶಾಭಾವ ಹೊಂದಿದ್ದೇವೆ ಎಂದು ಭಾರತದಲ್ಲಿರುವ ಯೂಕ್ರೇನ್ ರಾಯಭಾರಿ ಐಗೋರ್ ಪೊಲಿಖಾ ಹೇಳಿದ್ದಾರೆ.

ರಷ್ಯಾ ಸೇನೆ ಗುರುವಾರ ಯೂಕ್ರೇನ್ ಮೇಲೆ ಮಾಡಿದ ದಾಳಿಯಲ್ಲಿ 74 ಸೇನಾ ನೆಲೆಗಳನ್ನು ನಾಶಪಡಿಸಲಾಗಿದೆ. 11 ವಾಯುನೆಲೆ, ಮೂರು ಕಮಾಂಡ್ ಪೋಸ್ಟ್, 18 ರಾಡಾರ್ ಸ್ಟೇಶನ್​ಗಳು ಇದರಲ್ಲಿದ್ದವು. | ಇಗೋರ್ ಕೊನಾಶೆನ್​ಕೊವ್ ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ

ನ್ಯಾಟೋ ಎನ್​ಆರ್​ಎಫ್ ಪಡೆ ನಿಯೋಜನೆ ಇಲ್ಲ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನ್ಯಾಟೋ ಪ್ರತಿನಿಧಿಗಳು ಗುರುವಾರ ತುರ್ತು ಸಭೆ ನಡೆಸಿದರು. 30 ರಾಷ್ಟ್ರಗಳ ಸಂಘಟನೆಯಾಗಿರುವ ನ್ಯಾಟೋ, ಯೂಕ್ರೇನ್​ಗೆ ಬೆಂಬಲ ನೀಡಲು ಸಿದ್ಧತೆ ನಡೆಸುತ್ತಿದೆ. ರಷ್ಯಾದ ಆಕ್ರಮಣಕಾರಿ ನಡವಳಿಕೆಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ. ಇದರಿಂದಾಗಿ ಯೂರೋ-ಅಟ್ಲಾಂಟಿಕ್ ಭಾಗದ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ. ನ್ಯಾಟೊ ತನ್ನ ಸದಸ್ಯ ರಾಷ್ಟ್ರಗಳ ನೆರವಿಗೆ ಎಲ್ಲ ರೀತಿಯಲ್ಲೂ ಬದ್ಧವಾಗಿದೆ ಎಂದು ನ್ಯಾಟೋ ಸಭೆ ಹೇಳಿದೆ. ನ್ಯಾಟೋ ರೆಸ್ಪಾನ್ಸ್ ಫೋರ್ಸ್ (ಎನ್​ಆರ್​ಎಫ್) 40,000 ಟ್ರೂಪ್​ಗಳ ಪಡೆಯಾಗಿದ್ದು, ಇದರಲ್ಲಿ 5,000 ಟ್ರೂಪ್ ಫ್ರಾನ್ಸ್​ನ ನಾಯಕತ್ವದಲ್ಲಿದೆ. ಇದರಲ್ಲಿ ಜರ್ಮನಿ, ಪೊಲೆಂಡ್, ಪೋರ್ಚುಗಲ್, ಸ್ಪೇನ್​ನ ಟ್ರೂಪ್​ಗಳಿವೆ. ಇದು ಹೈ ಅಲರ್ಟ್​ನಲ್ಲಿವೆ. ಅಮೆರಿಕದ ಪೆಂಟಗನ್ ಕೂಡ 8,500 ಟ್ರೂಪ್​ಗಳನ್ನು ಹೈ ಅಲರ್ಟ್​ನಲ್ಲಿ ಇರಿಸಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯೂಕ್ರೇನ್​ನಲ್ಲಿ ಸೇನೆ ನಿಯೋಜನೆ ಮಾಡುವುದಿಲ್ಲ ಎಂದು ನ್ಯಾಟೊ ಹೇಳಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿ ಸಭೆ ನಡೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಎಸ್​ಎಸ್​ಎ ಅಜಿತ್ ದೋವಲ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಸಭೆಯಲ್ಲಿ ಹಾಜರಿದ್ದರು. ಪ್ರಧಾನಿ ಮೋದಿ ಶೀಘ್ರವೇ ಪುತಿನ್ ಅವರ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸೇನಾರಹಿತಗೊಳಿಸಲು ಸಮರ: ರಷ್ಯಾದ ಹಿತಕ್ಕೆ ವಿರುದ್ಧವಾಗಿ ನ್ಯಾಟೋ ಪಡೆಗಳ ಜತೆಗೆ ಸೇರಲು ಯೂಕ್ರೇನ್ ಮುಂದಾಗಿತ್ತು. ದೇಶಕ್ಕೆ ಸೇನಾ ರಕ್ಷಣೆ ಒದಗಿಸುವುದಾಗಿ ಹೇಳಿದರೂ ಅದನ್ನು ಯೂಕ್ರೇನ್ ಕಡೆಗಣಿಸಿತ್ತು. ಹೀಗಾಗಿ ಈ ದೇಶವನ್ನು ಸೇನೆ ರಹಿತ ಮತ್ತು ನಾಝಿ ರಹಿತಗೊಳಿಸುವ ಉದ್ದೇಶದೊಂದಿಗೆ ಈ ವಿಶೇಷ ಸೇನಾ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ರಷ್ಯಾದ ಈ ಕಾರ್ಯಾಚರಣೆ ವಿಚಾರವಾಗಿ ಯಾವುದೇ ಹಸ್ತಕ್ಷೇಪ ಮಾಡಿದರೂ ಅದರ ಪರಿಣಾಮವನ್ನು ಜಾಗತಿಕ ನಾಯಕರು ಎದುರಿಸಬೇಕಾದೀತು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಟಿವಿ ಭಾಷಣದಲ್ಲಿ ತಿಳಿಸಿದರು. ಈ ಭಾಷಣ ಮುಗಿದ ಬೆನ್ನಿಗೆ, ಕ್ಯಿವ್, ಖರ್ಕಿವ್, ಒಡೆಸಾಗಳಲ್ಲಿ ಸ್ಪೋಟದ ಸದ್ದು ಕೇಳಿಸಿತ್ತು. ಇದು ಸೇನಾ ಕಾರ್ಯಾಚರಣೆ ಎಂದು ರಷ್ಯಾ ಸೇನೆ ಘೋಷಿಸಿತು. ಬೆಲಾರಸ್​ನಿಂದ ಸೇನಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ರಷ್ಯಾಕ್ಕೆ ಚೀನಾ, ಪಾಕ್ ಬೆಂಬಲ: ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ಕುಗ್ಗಿಸಲು ಚೀನಾ, ಪಾಕಿಸ್ತಾನಗಳು ರಷ್ಯಾಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕೃಷಿ ಉತ್ಪನ್ನಗಳಿಗೆ ಚೀನಾ ಬಹುದೊಡ್ಡ ಮಾರುಕಟ್ಟೆ ಆಗಿದ್ದು, ರಷ್ಯಾದ ಎಲ್ಲ ಭಾಗಗಳಿಂದ ಗೋಧಿ ಆಮದು ಮಾಡಿಕೊಳ್ಳಲು ಚೀನಾದ ಕಸ್ಟಮ್್ಸ ಏಜೆನ್ಸಿ ಒಪ್ಪಿಗೆ ನೀಡಿದೆ. ಗೋಧಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ರಷ್ಯಾ ಅತಿದೊಡ್ಡ ರಾಷ್ಟ್ರವಾಗಿದ್ದು, ಇದನ್ನು ರಫ್ತು ಮಾಡುವುದಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿದರೆ ತೊಂದರೆ ಆಗುವುದು ಖಚಿತ.

ದಾಳಿ ನಿಲ್ಲಿಸಿ...: ಯೂಕ್ರೇನ್ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಬಿಕ್ಕಟ್ಟಿನಲ್ಲಿ ಭಾಗಿಯಾಗಿರುವ ಎಲ್ಲ ಪಕ್ಷದವರೂ ಭಿನ್ನ ಹಿತಾಸಕ್ತಿಗಳನ್ನು ಹೊಂದಿದ್ದು, ಯಾವುದೇ ರೀತಿಯ ಆಕ್ರಮಣಕಾರಿ ಧೋರಣೆ ತೋರಬಾರದು. ಸಂಯಮ ಕಾಯ್ದುಕೊಳ್ಳಬೇಕು. ಸದ್ಯದ ಬೆಳವಣಿಗೆ ಬಗ್ಗೆ ಖೇದವಿದೆ. ಇದನ್ನು ಸರಿಯಾಗಿ ನಿರ್ವಹಿಸದೇ ಹೋದರೆ, ಸದರಿ ಪ್ರಾಂತ್ಯದ ಶಾಂತಿ ಮತ್ತು ಸುರಕ್ಷತೆ ಕೈಮೀರಿ ಹೋಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಎಚ್ಚರಿಸಿದರು.

ಬಹಳ ತಡವಾಗಿ ಬಿಡ್ತು..: ವಿಶ್ವಸಂಸ್ಥೆಯ ಭದ್ರತಾ ಸಮಿತಿ ತುರ್ತಸಭೆ ನಡೆಯುತ್ತಿರುವಾಗಲೇ ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿತ್ತು. ಸಭೆ ಶುರುವಾಗುತ್ತಿದ್ದಂತೆ ಅಲ್ಲಿದ್ದ ಉಕ್ರೇನ್ ರಾಯಭಾರಿ ಸೆರ್ಗಿ ಕಿಸ್ಲಿಟ್​ಸ್ಯ ಹೇಳಿದ್ದು ಇಷ್ಟು - ಬಹಳ ತಡವಾಗಿ ಬಿಡ್ತು, ನನ್ನ ಪ್ರೀತಿಯ ಸಹೋದ್ಯೋಗಿಗಳೇ.. ನಮ್ಮ ದೇಶದ ಮೇಲೆ ರಷ್ಯಾ ದಾಳಿ ಆರಂಭಿಸಿ ಬಿಟ್ಟಿದೆ. ಬಿಕ್ಕಟ್ಟಿನಿಂದ ಹಿಂದೆ ಸರಿಯುವಂತೆ ಮಾಡಲು ಕರೆದಿರುವ ಈ ತುರ್ತಸಭೆ ಬಹಳ ತಡವಾಗಿ ಬಿಟ್ಟಿತು. ಈ ಯುದ್ಧ ನಿಲ್ಲಿಸುವಂತೆ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಕರೆ ಮಾಡಿ ಕೇಳಿಕೊಂಡೆ. ನಿಮ್ಮ ಬಳಿ ಸ್ಮಾರ್ಟ್​ಫೋನ್ ಇದೆ. ಮಾಸ್ಕೋದಲ್ಲಿರುವ ಅಧಿಕಾರಿಗಳಿಗೆ ಕರೆ ಮಾಡಿ ಹೇಳಿ ಎಂದು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾದ ರಾಯಬಾರಿ ವಸ್ಸಿಲಿ ನೆಬೆನ್​ಝಿಯಾ, ಈಗಾಗಲೇ ನಾನು ಹೇಳಿದಂತೆ ನನಗೆ ಈ ಹೊತ್ತಿನಲ್ಲಿ ಗೊತ್ತಿರುವುದು ಇಷ್ಟೆ. ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಈ ಹೊತ್ತಿನಲ್ಲಿ ರಷ್ಯಾದ ವಿದೇಶಾಂಗ ಸಚಿವರಿಗೆ ಕರೆಮಾಡುವ ಬಗ್ಗೆ ಆಲೋಚಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದರು. ಈ ವಾರದಲ್ಲಿ ಇದು ಎರಡನೇ ತುರ್ತು ಸಭೆ ಆಗಿತ್ತು.

ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯರು: ಯೂಕ್ರೇನ್​ನಲ್ಲಿ 20,000ಕ್ಕೂ ಹೆಚ್ಚು ಭಾರತೀಯರು ಇದ್ದು, ಅವರನ್ನು ವಾಪಸ್ ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯುದ್ಧ ಆರಂಭವಾಗಿರುವ ಕಾರಣ, ಹಂಗರಿ ಮೂಲಕ ಭಾರತೀಯರನ್ನು ಕರೆತರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ಸರಣಿ ಸಭೆಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಎಷ್ಟು ಹೊತ್ತಿಗೆ ಏನಾಯಿತು?

  • 4.52 am: ಯೂಕ್ರೇನ್ ಮೇಲೆ ಭಾರಿ ಪ್ರಮಾಣದ ಸೈಬರ್ ದಾಳಿ, ಕಂಪ್ಯೂಟರ್​ಗಳಲ್ಲಿ ಅಪಾಯಕಾರಿ ಮಾಲ್ವೇರ್​ಗಳ ಹಾವಳಿ
  • 8.22 am: ಯೂಕ್ರೇನ್ ಮೇಲೆ ದಾಳಿ ನಡೆಸದಂತೆ ರಷ್ಯಾ ಸೇನೆಯನ್ನು ತಡೆಯಲು ಅಧ್ಯಕ್ಷ ವ್ಲಾದಿಮಿರ್ ಪುತಿನ್​ಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೊನಿಯೋ ಗುಟೆರ್ರೆಸ್ ಮನವಿ
  • 8.30 am: ಪೂರ್ವ ಯೂಕ್ರೇನ್​ನಲ್ಲಿ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ರಷ್ಯಾ ವಿಚಾರದಲ್ಲಿ ತಲೆ ಹಾಕಿದರೆ ಪರಿಣಾಮ ಎದುರಿಸ ಬೇಕಾದೀತು ಎಂದು ವಿದೇಶಗಳಿಗೆ ನೇರ ಎಚ್ಚರಿಕೆ
  • 8.40 am: ಯೂಕ್ರೇನ್ ವಿರುದ್ಧ ಅಪ್ರಚೋದಿತ ಮತ್ತು ಅನ್ಯಾಯಯುತ ದಾಳಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾವನ್ನು ಇದಕ್ಕೆ ಹೊಣೆಗಾರ ನನ್ನಾಗಿಸಬೇಕು ಎಂದು ಜಗತ್ತಿಗೆ ಕರೆ ನೀಡಿದರು.
  • 9.19 am: ತತ್​ಕ್ಷಣವೇ ದಾಳಿಯಿಂದ ಹಿಂದೆ ಸರಿಯುವಂತೆ ಮತ್ತು ದಾಳಿ ಮುಂದುವರಿಸದಂತೆ ಭಾರತದ ಮನವಿ
  • 9.47 am: ಯೂಕ್ರೇನ್​ನ ಒಡೆಸಾ, ಖಾರ್ಕಿವ್ ನಗರಗಳಲ್ಲಿ ಸ್ಪೋಟದ ಸದ್ದು
  • 10.29 am: ಯೂಕ್ರೇನ್​ನ ಸೇನಾ ನೆಲೆ ಮತ್ತು ಇತರೆ ಸೇನಾ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾಗಿ ಘೋಷಿಸಿದ ರಷ್ಯಾ
  • 10.34 am: ದೇಶದಲ್ಲಿ ಸೇನಾಡಳಿತ ಮತ್ತು ಮೂರು ದಿನಗಳ ತುರ್ತಪರಿಸ್ಥಿತಿ ಘೋಷಿಸಿದ ಯೂಕ್ರೇನ್ ಸರ್ಕಾರದಿಂದ ತಲ್ಲಣಗೊಳ್ಳದಂತೆ ಪ್ರಜೆಗಳಿಗೆ ಮನವಿ.
  • 12.18 pm: ಯೂಕ್ರೇನ್​ನ ವಾಯು ರಕ್ಷಣಾ ಆಸ್ತಿ ಮತ್ತು ವಾಯುನೆಲೆಗಳನ್ನು ನೆಲಸಮ ಮಾಡಿದ್ದಾಗಿ ಘೋಷಿಸಿದ ರಷ್ಯಾ ಸೇನೆ
  • 1.16 pm: ಇದುವರೆಗೂ ಪರಿಗಣಿಸದೇ ಇದ್ದಂತಹ ‘ಕಠಿಣ ಮತ್ತು ತೀವ್ರತರ’ದ ನಿರ್ಬಂಧವನ್ನು ರಷ್ಯಾ ವಿರುದ್ಧ ಪ್ರಯೋಗಿಸಲು ಯುರೋಪ್ ಒಕ್ಕೂಟ ಚಿಂತನೆ
  • 2.40 pm: ರಷ್ಯಾ ದಾಳಿಯಿಂದ ಯೂಕ್ರೇನ್​ನ ವಾಯುನೆಲೆಯನ್ನು ರಕ್ಷಿಸುವಂತೆ ಜಾಗತಿಕ ನಾಯಕರನ್ನು ಕೋರಿದ ಯೂಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್​ಸ್ಕಿ
  • 3.21 pm: ರಷ್ಯಾ ಜತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವುದಾಗಿ ಘೋಷಿಸಿದ ಯೂಕ್ರೇನ್ ಸರ್ಕಾರ
  • 3.32 pm: ಯೂಕ್ರೇನ್ ಮಾಹಿತಿ ಪ್ರಕಾರ, ರಷ್ಯಾದ ದಾಳಿಗೆ ಈವೆರೆಗೆ 40 ಜನ ಮೃತಪಟ್ಟಿದ್ದಾರೆ.

ಸಹಾಯವಾಣಿ

ಭಾರತೀಯರಿಗೆ ನೆರವು ನೀಡುವ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗಿದ್ದು, ಅವುಗಳು ಹೀಗಿವೆ: +38 0997300483, +38 0997300428, +38 0933980327, +38 0635917881, +38 0935046170. ಇದಲ್ಲದೆ, ಟ್ವಿಟರ್ (@IndiainUkraine), ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್ ಪುಟಗಳಲ್ಲಿ ಭಾರತದ ರಾಯಭಾರ ಕಚೇರಿ ಖಾತೆಗಳನ್ನು ಅನುಸರಿಸುವಂತೆ ವಿದೇಶಾಂಗ ಸಚಿವಾಲಯ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net