ಡೆತ್​ ಟ್ರೈನ್​​ ವಿಡಿಯೋ ಬಿಡುಗಡೆ ಮಾಡಿ ರಷ್ಯಾದ ಬಣ್ಣ ಬಯಲು ಮಾಡಿದ ಯೂಕ್ರೇನ್​ ಸೇನೆ: ಈ ರೈಲಿನಲ್ಲಿ ಅಂತಹದ್ದೇನಿದೆ?

Russia Death Train
Published on

ಕೀವ್​: ರಷ್ಯಾ-ಯೂಕ್ರೇನ್​ ನಡುವೆ ಯುದ್ಧ ಪ್ರಾರಂಭವಾಗಿ ಮೂರು ತಿಂಗಳೇ ಕಳೆಯುತ್ತಾ ಬಂದರೂ ಈಗಲೂ ಇದರಲ್ಲಿ ಗೆದ್ದವರು ಯಾರು ಹಾಗೂ ಸೋತವರು ಯಾರು ಎಂಬುದು ಮಾತ್ರ ನಿರ್ಧಾರವಾಗಿಲ್ಲ.

ಬಲಿಷ್ಠ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾ ಸಣ್ಣ ದೇಶವಾಗಿರುವ ಯೂಕ್ರೇನ್​ನನ್ನು ಸೋಲಿಸಲು ಪರದಾಡುತ್ತಿದೆ. ಇತ್ತ ಜಗ್ಗದ ಯೂಕ್ರೇನ್​ ತನ್ನ ಶಕ್ತಿಮೀರಿ ಹೋರಾಟವನ್ನು ಮುಂದುವರಿಸಿದೆ. ಇನ್ನು ವಿಶ್ವದಾದ್ಯಂತ ರಷ್ಯಾ ನಡೆಗೆ ವಿರೋಧ ವ್ಯಕ್ತವಾಗಿದ್ದರೂ, ಯೂಕ್ರೇನ್​ ವಶಪಡಿಸಿಕೊಳ್ಳುವ ಗುರಿಯನ್ನು ತಲುಪೇ ತೀರುತ್ತೇವೆ ಎಂಬ ಹಠದಲ್ಲಿ ಪುಟಿನ್​​ ನಿರ್ಧರಿಸಿಬಿಟ್ಟಿದ್ದಾರೆ.

ಆದರೆ ನಾಯಕರ ಕಾದಾಟದಲ್ಲಿ ಪ್ರಾಣ ಕಳೆದುಕೊಂಡವರು ಮಾತ್ರ ಸೈನಿಕರು. ಅದರಲ್ಲೂ ರಷ್ಯಾದ ಸಾವಿರಾರು ಸೈನಿಕರು ಹತ್ಯೆಯಾಗಿರುವುದನ್ನು ಯೂಕ್ರೇನ್​ ಹೇಳಿಕೊಂಡು ಬರುತ್ತಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ, ಸೈನಿಕರ ಮೃತದೇಹವನ್ನು ಫ್ರೀಜ್​ನಲ್ಲಿ ಸಂಗ್ರಹಿಸಿ ರೈಲಿನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯವೊಂದು ಜಗಜ್ಜಾಹೀರಾಗಿದೆ. ಇದಷ್ಟೇ ಅಲ್ಲ,  ನಾಗರಿಕರಿಂದ ಲೂಟಿ ಮಾಡಿದ ಚಿನ್ನದ ಆಭರಣಗಳನ್ನು ಇದರಲ್ಲಿ ಕೊಂಡೊಯ್ಯಲಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ರಷ್ಯಾದ ಸಾವಿನ ರೈಲು ಎಂದೇ ಕರೆಯಲಾಗಿರುವ ಈ ರೈಲಿನಲ್ಲಿ ಯುದ್ಧದಲ್ಲಿ ಸಾವಿರಾರು ಸೈನಿಕರ ಜೀವ ಪಡೆದಿರುವ ಕರಾಳ ಸತ್ಯವನ್ನು ತಿಳಿಸಿಕೊಡುತ್ತಿದೆ. ಈ ಬಗ್ಗೆ ಯೂಕ್ರೇನ್​ ಸೇನೆ ಈ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಯುದ್ಧದಲ್ಲಿ ಸಾವಿಗೀಡಾದ ಸೈನಿಕರ ಮೃತದೇಹವನ್ನು ಕೊಂಡೊಯ್ಯಲು ರಷ್ಯಾ ರೈಲನ್ನೇ ಕಳುಹಿಸಿತ್ತು. ಇದರಲ್ಲಿ ಸಂರಕ್ಷಿಸಿಡಲಾದ ಸೈನಿಕರ ಮೃತದೇಹವನ್ನು ಇಡಲಾಗಿತ್ತು. ಇದನ್ನು ವೀಕ್ಷಿಸಲು ಯೂಕ್ರೇನ್​​ನ ಕೆಲವೇ ಪತ್ರಕರ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೇ ವಿಡಿಯೋವನ್ನು ಸೇನೆ ಹಂಚಿಕೊಂಡಿದೆ.

ದೇಶವನ್ನು ನಾಶ ಮಾಡಿದ್ದಷ್ಟೇ ಅಲ್ಲದೇ ರಷ್ಯಾ ಸೇನೆ ನಾಗಕರಿಂದ ಚಿನ್ನದ ಆಭರಣವನ್ನು ಲೂಟಿ ಮಾಡಿದೆ. ಸೈನಿಕರ ಮೃತದೇಹಗಳ ಜತೆಗೆ ಚಿನ್ನವನ್ನು ಹೊತ್ತೊಯ್ಯುತ್ತಿರುವ ರಷ್ಯಾದ ಬಣ್ಣ ಕೊನೆಗೂ ಬಯಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net