

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದಲ್ಲಿರುವ ಗ್ರಾಮೀಣ ವೃತ್ತ ಪೊಲೀಸ್ ಠಾಣೆಯ ಕಚೇರಿಯನ್ನು ಹಲಗೇರಿ ಅಥವಾ ನಗರದ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಕುಮಾರಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ರಾಣೆಬೆನ್ನೂರ ನಗರದಲ್ಲಿದ್ದ ಗ್ರಾಮೀಣ ಠಾಣೆಯನ್ನು ಕುಮಾರಪಟ್ಟಣಕ್ಕೆ ಸ್ಥಳಾಂತರ ಮಾಡಲಾಗಿದೆ. ಕುಮಾರಪಟ್ಟಣ ಹರಿಹರ ಬಳಿಯಿರುವ ಒಂದು ಬದಿಯಾಗಿದೆ. ಇದರಿಂದ ರಾಣೆಬೆನ್ನೂರ ಗ್ರಾಮೀಣ ವ್ಯಾಪ್ತಿಯ ಗ್ರಾಮಗಳ ಜನತೆ ಪೊಲೀಸ್ ಠಾಣೆ ಕೆಲಸಗಳಿಗೆ ಓಡಾಡಲು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗುಡ್ಡದ ಹೊಸಳ್ಳಿ, ಮಾದವರಾಯಣಪುರ ಸೇರಿ ವಿವಿಧ ಗ್ರಾಮಗಳ ಜನರು ದೂರು-ಅಹವಾಲು ಸಲ್ಲಿಸಲು ಠಾಣೆಗೆ ಬಂದು ಹೋಗುವುದು ಕಷ್ಟಕರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಗ್ರಾಮೀಣ ಠಾಣೆಯನ್ನು ಹಲಗೇರಿ ಅಥವಾ ನಗರದ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ರೈತರಾದ ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ಅಪ್ಪಣ್ಣ ಕೆ., ವೀರೇಶ ಅಂಗಡಿ, ರಾಮನಗೌಡ ಪಾಟೀಲ, ನಾಗಪ್ಪ ಸಣ್ಣಮನಿ, ರವಿ ಮಳ್ಳಳ್ಳಿ, ಇಕಬಾಲ್‌ಸಾಬ್ ಸೇತಸನದಿ, ತಿಪ್ಪೇಶ ನಾಯಕ, ಬಸವನಗೌಡ ಹಿಂಡೇರ, ಪರ್ವತಗೌಡ ಕೂಸಗೂರು, ಶಿವಾನಂದ ಲಿಂಗದಹಳ್ಳಿ, ಬಸವರಾಜ ಓಲೇಕಾರ ಮತ್ತಿತರರು ಇದ್ದರು.