ಸಖತ್​ ಐಡಿಯಾ ಗುರು| ಎಲ್ಲರ ಕೈ ಹಿಡಿಯುತ್ತೆ ಗ್ರಾಮೋದ್ಯೋಗ

Gudi Kaigarike
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಎಲ್ಲರ ಕೈ ಹಿಡಿಯುತ್ತೆ ಗ್ರಾಮೋದ್ಯೋಗ

ಈ ಕರೊನಾವೂ ಸೇರಿದಂತೆ ನಮ್ಮ ಇತ್ತೀಚಿನ ಕ್ಷೋಭೆಗಳಿಗೆ ಪರಿಹಾರವೆಂದರೆ ಗ್ರಾಮೊದ್ಯೋಗಗಳು ಮತ್ತು ಸಣ್ಣ- ಅತಿ ಸಣ್ಣ ಕೈಗಾರಿಕೆಗಳು. ಗ್ರಾಮೀಣ ಜನರಿಗೆ ಸಬ್ಸಿಡಿ ಮಾತ್ರವಲ್ಲ, ಸಾಮೂಹಿಕ ಕೈಗಾರಿಕೆ ನಡೆಸುವ ತರಬೇತಿ ಅಗತ್ಯವಿದೆ. ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಈ ಕೆಲಸ ಮಾಡಬೇಕು. ಹೆಂಚು, ಬೀಡಿ ಕ್ಷೇತ್ರದಲ್ಲಿ ಗ್ರಾಮೀಣ ಉದ್ದಿಮೆ ಸಂಘಟನೆಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಉದಾಹರಣೆ ನಮ್ಮಲ್ಲಿ ಇದೆ. ಬೀಡಿ ಸೇದುವುದು ಸರಿಯಲ್ಲ ಎಂಬುದನ್ನು ಬಿಟ್ಟರೆ, ಆ ಕ್ಷೇತ್ರವನ್ನು ಸಂಘಟನೆ ಮಾಡಿದ ರೀತಿ ಅಸಾಧಾರಣ. ಗ್ರಾಮೋದ್ಯೋಗ ವಿಕೇಂದ್ರೀಕೃತ ರೀತಿ ಉತ್ಪಾದನೆ, ಕೇಂದ್ರೀಕೃತ ರೀತಿ ಮಾರಾಟ. ಅತ್ಯಂತ ಸಣ್ಣ ಬಂಡವಾಳದೊಂದಿಗೆ ಆರಂಭಿಸಬಹುದಾದ ಉದ್ದಿಮೆಗಳಲ್ಲಿ ಇವು ಪ್ರಮುಖವಾದವು. ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಭಾರತೀಯರ ಕೈಹಿಡಿದಿದ್ದು ಈ ಕ್ಷೇತ್ರವೇ. ಇದರಲ್ಲಿ ಅವಕಾಶ ಸಾವಿರಾರು. ರೊಟ್ಟಿ, ಚಟ್ನಿ ತಯಾರಿಕೆಯಿಂದ ಹಿಡಿದು, ಸೀಮೆ ಸುಣ್ಣ ತಯಾರಿಕೆವರೆಗೆ ಲೆಕ್ಕವಿಲ್ಲದಷ್ಟು ಬಗೆಗಳಿವೆ. ತಾವಿರುವ ಕಡೆಗಳಲ್ಲಿ ಸಿಗುವ ಕಚ್ಚಾ ವಸ್ತು, ಅದರಿಂದ ತಯಾರಿಸಬಹುದಾದ ಉತ್ಪನ್ನ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಕೊಂಚ ಸಾವಧಾನದಿಂದ ಯೋಚಿಸಿ ತೀರ್ಮಾನ ಮಾಡಿದರೆ ಉದ್ಯಮಶೀಲತೆ ಕಷ್ಟವೇನಲ್ಲ.

| ಪ್ರಸನ್ನ ಹೆಗ್ಗೋಡು ಚರಕ-ದೇಸಿ ಸಂಸ್ಥೆಗಳ ಸ್ಥಾಪಕ, ರಂಗಕರ್ವಿು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net