

ರಿಪ್ಪನ್‌ಪೇಟೆ: ಗ್ರಾಮದ ಅಭಿವೃದ್ಧಿಗೆ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಪೂರಕವಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಸಭೆ, 2025-26ನೇ ಸಾಲಿನ ನರೇಗಾ ಕಾಮಗಾರಿ ಪಟ್ಟಿ ತಯಾರಿಕೆ ಮತ್ತು ಅನುಮೋದನೆ ಸಭೆಯಲ್ಲಿ ಮಾತನಾಡಿ, ನರೇಗಾದಲ್ಲಿ ವೈಯುಕ್ತಿಕ, ಸಾರ್ವಜನಿಕ ಕಾಮಗಾರಿ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಜತೆಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಚಿಂತನೆ ಒಳಗೊಂಡಿರುವ ಉತ್ತಮ ಯೋಜನೆ. ನಿಯಮ ಪಾಲನೆಯೊಂದಿಗೆ ಸಾರ್ವಜನಿಕರು ಕಾಮಗಾರಿ ಕೈಗೊಳ್ಳಬೇಕು. ರೈತರ ವೈಯುಕ್ತಿಕ ಕಾಮಗಾರಿಗಳಲ್ಲಿ ತೋಟ ನಿರ್ಮಾಣಕ್ಕೂ ಅವಕಾಶವಿದೆ. ತೋಟಗಾರಿಕಾ ಅಧಿಕಾರಿಗಳು ಅನುಮೋದಿತ ಪಟ್ಟಿ ತೆಗೆದಕೊಂಡು ಹಣ ಬಿಡುಗಡೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಬೇಕು. ವಿಳಂಬ ಮಾಡಿ ರೈತರಿಗೆ ತೊಂದರೆ ನೀಡಬಾರದು ಎಂದರು.
ಕೊಟ್ಟಿಗೆ, ಗೊಬ್ಬರ ಗುಂಡಿ, ಅಡಕೆ ತೋಟ ನಿರ್ಮಾಣ ಇತರ ಕಾಮಗಾರಿಗಳ ಮಂಜೂರಾತಿಗೆ ಬೇಡಿಕೆ ಪಟ್ಟಿಯನ್ನು ಪಡೆದುಕೊಂಡು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜನರ ಹಾಜರಾತಿ ಕೊರತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಬಿಜೆಪಿ ಬೆಂಬಲಿತ ಐವರು ಸದಸ್ಯರು ಎಡತೊಳಿಗೆ ಕಪ್ಪುಪಟ್ಟಿ ಧರಿಸಿ ಪಾಲ್ಗೊಂಡರು. ಕೆಲ ಸಮಯದ ನಂತರ ಕಪ್ಪುಪಟ್ಟಿ ತೆಗೆದ ಉಪಾಧ್ಯಕ್ಷರು ಸಭೆ ಉದ್ದೇಶಿಸಿ ನರೇಗಾ ಯೋಜನೆ ಅನುಷ್ಠಾನದ ಬಗ್ಗೆ ಮಾತನಾಡಿದರು.
ಅಕ್ಷರ ದಾಸೋಹ ಯೋಜನಾಧಿಕಾರಿ ಶೇಷಾಚಲ ನೊಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ವೇದಾವತಿ, ಪ್ರಕಾಶ್ ಪಾಲೇಕರ್, ಆಸೀಫ್, ನಿರೂಪ್ ಕುಮಾರ್, ಜಿ.ಡಿ.ಮಲ್ಲಿಕಾರ್ಜುನ, ಮಹಾಲಕ್ಷ್ಮೀ, ಡಿ.ಇ.ಮಧುಸೂದನ, ಎನ್.ಚಂದ್ರೇಶ, ದಾನಮ್ಮ, ಪಿಡಿಒ ನಾಗರಾಜ್, ಎನ್‌ಆರ್‌ಇಜಿಎ ಲಕ್ಷ್ಮೀ, ಟಿ.ಆರ್. ಕೃಷ್ಣಪ್ಪ ಇತರರಿದ್ದರು.